21 June 2026 |

ಕಲುಷಿತ ನೀರಿನ ದೂರು ಹಿನ್ನೆಲೆ ತುರ್ತು ಸಭೆ: ಸಾರ್ವಜನಿಕರೊಂದಿಗೆ ಚರ್ಚಿಸಿದ ಶಾಸಕ ವೇದವ್ಯಾಸ ಕಾಮತ್

  • 20 Jun 2026 02:08:11 PM

ಮಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಕಲುಷಿತ ನೀರು ಪೂರೈಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರಿಂದ ಕೆಲವರು ಅಸ್ವಸ್ಥಗೊಂಡಿರುವ ಹಿನ್ನೆಲೆ ಬಿಜೈ 31ನೇ ವಾರ್ಡ್ ವ್ಯಾಪ್ತಿಯ ನೋಡು ಬಟ್ಟಗುಡ್ಡೆ ಪ್ರದೇಶದ ರಾಮಕೃಷ್ಣ ಭಜನಾ ಮಂದಿರದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಯಿತು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನೋಡು ಬಟ್ಟಗುಡ್ಡೆಯ ಕೆಳಭಾಗದ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಬೆರೆತು ಹಲವು ಮನೆಗಳಿಗೆ ಪೂರೈಕೆಯಾಗಿದೆ ಎಂಬ ದೂರುಗಳು ಬಂದಿದ್ದರಿಂದ ಸಂಬಂಧಿತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

 

ಕಳೆದ ದಿನದಿಂದಲೇ ಸ್ಥಳೀಯ ಮನೆಗಳ ನಲ್ಲಿಗಳಿಂದ ಸಂಗ್ರಹಿಸಲಾದ ನೀರಿನ ಮಾದರಿಗಳನ್ನು ದಿನಕ್ಕೆ ಹಲವು ಬಾರಿ ಪರೀಕ್ಷಿಸಲಾಗುತ್ತಿದ್ದು, ಪ್ರಸ್ತುತ ಬಳಕೆಗೆ ಯೋಗ್ಯವಾಗಿರುವುದನ್ನು ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲೇ ದೃಢಪಡಿಸಿದ್ದಾರೆ ಎಂದು ಅವರು ಹೇಳಿದರು.

 

ಆದಾಗ್ಯೂ, ಈ ಭಾಗದ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಟ್ಯಾಂಕ್‌ಗಳಲ್ಲಿ ಈಗಾಗಲೇ ಸಂಗ್ರಹವಾಗಿರುವ ಹಳೆಯ ನೀರನ್ನು ತೆರವುಗೊಳಿಸಿ, ಹೊಸದಾಗಿ ಶುದ್ಧ ನೀರನ್ನು ತುಂಬಿಸಿಕೊಳ್ಳುವಂತೆ ನಿವಾಸಿಗಳಿಗೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಉಂಟಾದರೆ ತಕ್ಷಣವೇ ತಮ್ಮ ಗಮನಕ್ಕೆ ಅಥವಾ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.

 

ಕುಡಿಯುವ ನೀರಿನ ವಿಷಯ ನೇರವಾಗಿ ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ್ದು, ಈ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು. ಜೊತೆಗೆ, ಮುಂದಿನ ಕೆಲವು ದಿನಗಳ ಕಾಲ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.