21 June 2026 |

ಪಾಂಗಾಳದಲ್ಲಿ ರಸ್ತೆ ಅಪಘಾತ: ಖಾಸಗಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿಗೆ ವೃದ್ಧೆ ಬಲಿ

  • 20 Jun 2026 02:10:34 PM

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

 

ಮೃತರನ್ನು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಸಿಬ್ಬಂದಿಯಾಗಿದ್ದ ಶ್ರೀಮತಿ ಭಟ್ (73) ಎಂದು ಗುರುತಿಸಲಾಗಿದೆ. ಪಾಂಗಾಳ ಹಾಗೂ ಕಾಪುವಿನಲ್ಲಿ ನಿವಾಸ ಹೊಂದಿದ್ದ ಅವರು, ಕಾಪುವಿನಿಂದ ಪಾಂಗಾಳಕ್ಕೆ ಬಂದು ಹಾಲು ಖರೀದಿಸಿ ಮನೆಗೆ ಮರಳುವ ವೇಳೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

 

ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ವೃದ್ಧೆಗೆ ಡಿಕ್ಕಿ ಹೊಡೆದಿದ್ದು, ಅದರ ತೀವ್ರತೆಗೆ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಹೆಚ್ಚಿನ ರಕ್ತಸ್ರಾವ ಉಂಟಾದ ಕಾರಣ ಅವರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಅಪಘಾತದ ಬಳಿಕ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ಇದೇ ವೇಳೆ, ಶ್ರೀಮತಿ ಭಟ್ ಅವರ ಪತಿ ಕೆಲವು ವರ್ಷಗಳ ಹಿಂದೆ ಉದ್ಯಾವರ ಸೇತುವೆ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.