30 June 2026 |

ಮಂಗಳೂರಿನಲ್ಲಿ ಸಿನೆಮಾ ಶೈಲಿಯ ದರೋಡೆ: ಕೇರಳ ಉದ್ಯಮಿಯ ಪತ್ನಿ-ಮಗನ ಅಪಹರಣ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

  • 29 Jun 2026 07:41:34 PM

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಸಮೀಪ ಸೋಮವಾರ ಮುಂಜಾನೆ ನಡೆದ ಭೀಕರ ದರೋಡೆ ಪ್ರಕರಣ ಕರಾವಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೇರಳದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ ಬಳಿಕ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದೆ.

 

ದರೋಡೆಗೆ ಒಳಗಾದವರು ಕೇರಳದ ಪಯ್ಯನ್ನೂರು ನಿವಾಸಿ ಹಾಗೂ ಉದ್ಯಮಿ ವಿಕಾಸ್. ಅವರು ಪತ್ನಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸ್ವಗ್ರಾಮಕ್ಕೆ ಕಾರಿನಲ್ಲಿ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

 

ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆ ಸುಮಾರು 2.30ರ ವೇಳೆಗೆ ಬೈಕಂಪಾಡಿಯ ದ್ವಾರ ಹೋಟೆಲ್ ಸಮೀಪ ವಿಕಾಸ್ ಅವರ ಕಾರು ತಲುಪುತ್ತಿದ್ದಂತೆ, ಮೂರು ಕಾರುಗಳಲ್ಲಿ ಬಂದ 7ರಿಂದ 8 ಮಂದಿ ದುಷ್ಕರ್ಮಿಗಳು ವಾಹನವನ್ನು ತಡೆದಿದ್ದಾರೆ. ಬಳಿಕ ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಇಳಿಸಿ, ಅವರ ಪತ್ನಿ ಮತ್ತು ಮಗನಿದ್ದ ಕಾರನ್ನೇ ಕೊಂಡೊಯ್ದಿದ್ದಾರೆ.

 

ನಂತರ ಪಣಂಬೂರು ಬೀಚ್ ರಸ್ತೆಯ ಬಳಿ ಕಾರು ನಿಲ್ಲಿಸಿದ ಆರೋಪಿಗಳು, ತಾಯಿ-ಮಗನ ಬಳಿಯಿದ್ದ ಹಾಗೂ ಬ್ಯಾಗ್‌ಗಳಲ್ಲಿ ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇತರೆ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ. ಬಳಿಕ ಇಬ್ಬರನ್ನೂ ರಸ್ತೆಯಲ್ಲೇ ಬಿಟ್ಟು, ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

 

ಘಟನೆಯ ಬಳಿಕ ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

 

ನಡುರಾತ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಟುಂಬವನ್ನು ಗುರಿಯಾಗಿಸಿಕೊಂಡು ಅಪಹರಣ ಹಾಗೂ ದರೋಡೆ ನಡೆಸಿರುವ ಈ ಘಟನೆ ಸಾರ್ವಜನಿಕರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸಿದ್ದು, ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು ಬಲಪಡಿಸುವಂತೆ ಆಗ್ರಹಗಳು ಕೇಳಿಬರುತ್ತಿವೆ.