ಕಿನ್ನಿಗೋಳಿ: ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿನ್ನಿಗೋಳಿಯಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ಮೃತರನ್ನು ಪೂಂಜಾಲಕಟ್ಟೆಯ ನಿವಾಸಿ ರಮೇಶ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಅವರು ಕಳೆದ 18 ವರ್ಷಗಳಿಂದ ಕಿನ್ನಿಗೋಳಿಯ ಖಾಸಗಿ ಬೇಕರಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಬೇಕರಿ ಫ್ಯಾಕ್ಟರಿಯಲ್ಲೇ ವಾಸವಾಗಿದ್ದರು. ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ರಮೇಶ್ ಪೂಜಾರಿ ಶಾಂತ ಸ್ವಭಾವದವರಾಗಿದ್ದರು ಎಂದು ಪರಿಚಿತರು ತಿಳಿಸಿದ್ದಾರೆ.
ಭಾನುವಾರ (ಜೂನ್ 29) ಬೆಳಿಗ್ಗೆ ಅವರು ಎಂದಿನಂತೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಹುಡುಕಾಟ ಆರಂಭಿಸಿದರು. ಈ ವೇಳೆ ಬಾವಿಯ ಸಮೀಪ ಅವರ ಪಾದರಕ್ಷೆಗಳು ಕಂಡುಬಂದಿದ್ದರಿಂದ ಅನುಮಾನಗೊಂಡ ಸಿಬ್ಬಂದಿ ಬಾವಿಯೊಳಗೆ ಪರಿಶೀಲನೆ ನಡೆಸಿದರು. ಆಗ ಅವರ ಮೃತದೇಹ ಪತ್ತೆಯಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜೀವರಕ್ಷಕ ಆಂಬುಲೆನ್ಸ್ ತಂಡದ ದಾವೂದ್, ಪ್ರಸಾದ್ ಕೇಚು, ಜಲಾಲ್ ಹಾಗೂ ಅಖರ್ ಸ್ಥಳಕ್ಕಾಗಮಿಸಿದರು. ಸ್ಥಳೀಯರಾದ ಪ್ರವೀಣ್ ಕಾಪಿಕಾಡ್ ಮತ್ತು ಇತರ ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.





