29 June 2026 |

ತಿರುಪತಿ: ರೂ. 45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂತಿರುಗಿಸಿದ ಮಹಿಳಾ ಹೋಟೆಲ್ ಸಿಬ್ಬಂದಿ

  • 28 Jun 2026 07:34:46 PM

ತಿರುಪತಿ: ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಾಗಿ ತಿರುಪತಿಯ ಹೋಟೆಲ್ ಸಿಬ್ಬಂದಿಯೊಬ್ಬರು ಸುಮಾರು ₹45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಿದ ಘಟನೆ ನಡೆದಿದೆ.

 

ಬೆಂಗಳೂರಿನ ನಿವಾಸಿ ಭರತ್ ಅವರು ತಿರುಮಲದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುವ ವೇಳೆ ತಿರುಪತಿಯ ಹೋಟೆಲ್ ಗರುಡಾದ್ರಿಯಲ್ಲಿ ತಂಗಿದ್ದರು. ಈ ವೇಳೆ ಆತುರದಲ್ಲಿ ಚಿನ್ನಾಭರಣ ಹೊಂದಿದ್ದ ಬ್ಯಾಗ್ ಅನ್ನು ಹೋಟೆಲ್‌ನಲ್ಲೇ ಮರೆತು ಹೋಗಿದ್ದರು. ಬೆಂಗಳೂರಿಗೆ ತಲುಪಿದ ಬಳಿಕ ಬ್ಯಾಗ್ ಕಾಣೆಯಾಗಿರುವುದು ಗೊತ್ತಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. 

 

ಹೋಟೆಲ್ ಕ್ಯಾಶಿಯರ್ ಶಶಿ ಅವರು ಬ್ಯಾಗ್ ಪತ್ತೆಹಚ್ಚಿ ಅದನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ಚಿನ್ನಾಭರಣವನ್ನು ಭರತ್ ಮತ್ತು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮಹಿಳಾ ಸಿಬ್ಬಂದಿ ಶಶಿಯವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ತಿರುಪತಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಲ್. ಸುಬ್ಬರಾಯುಡು ಅವರು ಅವರನ್ನು ಸನ್ಮಾನಿಸಿದರು.