02 July 2026 |

ಮಂಗಳೂರಿನಲ್ಲಿ ಮಳೆ ದುರಂತ: ಭೂ ಕುಸಿತಕ್ಕೆ ತಾಯಿ ಹಾಗೂ ಇಬ್ಬರು ಮಕ್ಕಳು ಬಲಿ

  • 01 Jul 2026 09:03:27 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ರಾತ್ರಿ ಆರಂಭವಾದ ಭಾರಿ ಮಳೆಯು ಹಲವು ಅವಾಂತರಗಳಿಗೆ ಕಾರಣವಾಗಿದ್ದು, ನಗರದ ಕಂಕನಾಡಿ ನಾಗುರಿ ಪ್ರದೇಶದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಎತ್ತರದ ಪ್ರದೇಶದ ಮಣ್ಣು ಜಾರಿ ಕೆಳಭಾಗದಲ್ಲಿದ್ದ ಹಳೆಯ ಮನೆಯ ಮೇಲೆ ಬಿದ್ದ ಪರಿಣಾಮ, ಮನೆಯೊಳಗಿದ್ದ ಬಿಹಾರ ಮೂಲದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

 

ಮೃತರು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಂಕನಾಡಿ ನಗರ ಪೊಲೀಸ್ ಠಾಣೆ ಸಮೀಪದ ನಾಗುರಿ ಪ್ರದೇಶದಲ್ಲಿ ಈ ದುರಂತ ನಡೆದಿದೆ.

 

ಭೂ ಕುಸಿತ ಸಂಭವಿಸಿದ ವೇಳೆ ಮನೆಯೊಳಗೆ ಒಟ್ಟು ನಾಲ್ವರು ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮಣ್ಣಿನಡಿ ಸಿಲುಕಿದ್ದವರನ್ನು ಹೊರತೆಗೆದು ರಕ್ಷಿಸಲು ಹರಸಾಹಸಪಟ್ಟರೂ, ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ.

 

ಇದೇ ವೇಳೆ ಅಪಾಯದಲ್ಲಿದ್ದ ಉಳಿದ ಮೂವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ಇನ್ನೂ ಮಣ್ಣು ತೆರವುಗೊಳಿಸುವ ಹಾಗೂ ಪರಿಶೀಲನಾ ಕಾರ್ಯಗಳು ಮುಂದುವರಿದಿವೆ.

 

ಇನ್ನೊಂದೆಡೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ಹಲವೆಡೆ ಕೃತಕ ನೆರೆ ಉಂಟಾಗಿದೆ. ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದ್ದು, ವಾಹನ ಸಂಚಾರ ಮತ್ತು ಸಾರ್ವಜನಿಕರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮಳೆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.