01 July 2026 |

ಕಲ್ಲಡ್ಕ: ಫ್ಲೈಓವರ್ ಕೆಳಗೆ ರಿಕ್ಷಾ ಪಾರ್ಕ್‌ಗೆ ಅವಕಾಶ ಕಲ್ಪಿಸುವಂತೆ ತಹಸಿಲ್ದಾರ್ ಹಾಗೂ ಸಂಚಾರಿ ಪೊಲೀಸರಿಗೆ ಮನವಿ

  • 30 Jun 2026 08:59:36 PM

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ–78ರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕ್ರಾಸ್ ಬಳಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರಿಕ್ಷಾ ಪಾರ್ಕ್ ರಸ್ತೆ ಅಗಲೀಕರಣ ಕಾಮಗಾರಿಯ ವೇಳೆ ತೆರವುಗೊಂಡ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅನುಕೂಲ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಫ್ಲೈಓವರ್ ಕೆಳಭಾಗದಲ್ಲಿ ರಿಕ್ಷಾ ಪಾರ್ಕ್‌ಗೆ ಸ್ಥಳಾವಕಾಶ ಕಲ್ಪಿಸುವಂತೆ ಶ್ರೀರಾಮ್ ರಿಕ್ಷಾ ಪಾರ್ಕ್ (ಬಿಎಂಎಸ್) ವತಿಯಿಂದ ಬಂಟ್ವಾಳ ತಾಲೂಕು ತಹಸಿಲ್ದಾರ್ ಹಾಗೂ ಪಾಣೆಮಂಗಳೂರು ಸಂಚಾರಿ ಠಾಣೆಯ ಎಸ್ಐ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಕಲ್ಲಡ್ಕ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರಿಕ್ಷಾಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡಲು ಫ್ಲೈಓವರ್ ಕೆಳಭಾಗವು ಸೂಕ್ತ ಸ್ಥಳವಾಗಿದ್ದು, ಇದರಿಂದ ಸಾರ್ವಜನಿಕರಿಗೂ ಹಾಗೂ ರಿಕ್ಷಾ ಚಾಲಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

 

ಈ ಸಂದರ್ಭದಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಬಂಟ್ವಾಳ ತಾಲೂಕು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ ಅವರ ಮಾರ್ಗದರ್ಶನದಲ್ಲಿ, ಶ್ರೀರಾಮ್ ರಿಕ್ಷಾ ಪಾರ್ಕ್ ಅಧ್ಯಕ್ಷ ವಸಂತ್ ಮುಲಾರು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಾದ ಜಯ, ರಾಧಾಕೃಷ್ಣ, ಬಾಲಕೃಷ್ಣ, ರವಿ ಅಯ್ಯದ ಕೋಡಿ,  ದಿವಾಕರ, ಮಾಧವ ಕಾಂಪ್ರಬೈಲು, ಮುರಳಿ, ರಾಜೇಶ್, ಕೃಷ್ಣ ಕಿಂಙಣಬೈಲು, ಚಂದ್ರ ಶೇಖರ, ಜಗದೀಶ್ ಕಿಂಙಣಬೈಲು, ಮನೋಹರ್ ಕಾಂಪ್ರಬೈಲು ಉಪಸ್ಥಿತರಿದ್ದರು.

 

ರಿಕ್ಷಾ ಚಾಲಕರು, ರಸ್ತೆ ಅಗಲೀಕರಣದ ಬಳಿಕ ಶಾಶ್ವತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಂಡು ಫ್ಲೈಓವರ್ ಕೆಳಭಾಗದಲ್ಲಿ ರಿಕ್ಷಾ ಪಾರ್ಕ್‌ಗೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.