ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾದ ತೀವ್ರ ಅಲೆಗಳ ಅಬ್ಬರದಿಂದ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ.
‘ಐಎಫ್‌ಬಿ ಮಂಜು ಮಾತಾ’ ಹೆಸರಿನ ಮೀನುಗಾರಿಕಾ ದೋಣಿ ಸೋಮವಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಹವಾಮಾನ ಏಕಾಏಕಿ ಹದಗೆಟ್ಟಿದೆ. ಪರಿಣಾಮ ಸಮುದ್ರದಲ್ಲಿ ಭಾರಿ ಅಲೆಗಳು ಎದ್ದಿದ್ದು, ಅವುಗಳ ಅಬ್ಬರಕ್ಕೆ ದೋಣಿ ಸಿಲುಕಿದೆ. ದೈತ್ಯ ಅಲೆಗಳ ಹೊಡೆತದಿಂದ ದೋಣಿಯೊಳಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗತೊಡಗಿದ್ದು, ಪರಿಸ್ಥಿತಿ ಗಂಭೀರಗೊಂಡಿದೆ.
ದೋಣಿಯೊಳಗಿನ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅದು ಮುಳುಗುವ ಹಂತಕ್ಕೆ ತಲುಪಿದೆ. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ತಮ್ಮ ಅತ್ಯಾಧುನಿಕ ‘ಸಚೇತ್’ ಸಮರ ನೌಕೆಯೊಂದಿಗೆ ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ದೋಣಿಯ ನಿಖರ ಸ್ಥಳವನ್ನು ಪತ್ತೆಹಚ್ಚಿದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು.
ಆದರೆ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿದ್ದ ಕಾರಣ ಮೀನುಗಾರರ ದೋಣಿಯ ಸಮೀಪಕ್ಕೆ ನೌಕೆಯನ್ನು ಕೊಂಡೊಯ್ಯುವುದು ಸವಾಲಿನ ಹಾಗೂ ಅಪಾಯಕಾರಿಯಾದ ಕಾರ್ಯವಾಗಿತ್ತು. ಆದರೂ ರಕ್ಷಣಾ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿ ದೋಣಿಯಲ್ಲಿದ್ದ ಎಲ್ಲ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.





