ವಿಟ್ಲ: ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು, ನಾಗ ದೇವರ ಬಗ್ಗೆ ಜನರಲ್ಲಿ ಅಪಾರ ಭಕ್ತಿ ಮತ್ತು ಗೌರವವಿದೆ. ನಾಗಹಾವು ಮೃತಪಟ್ಟರೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವ ಸಂಪ್ರದಾಯವೂ ಹಲವು ಕಡೆಗಳಲ್ಲಿ ಇದೆ. ಆದರೆ ಇದೇ ನಂಬಿಕೆಯನ್ನು ಕೆಲವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಬಂಟ್ವಾಳ ತಾಲೂಕಿನ ವಿಟ್ಲ–ಕಲ್ಲಡ್ಕ ರಸ್ತೆಯ ಕೆಲಿಂಜ ಸಮೀಪದ ನಗ್ರಿಮೂಲೆ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಇಂತಹದ್ದೇ ವಂಚನೆಯೊಂದು ನಡೆದಿರುವ ಆರೋಪ ಕೇಳಿಬಂದಿದೆ.
ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ಜನರು ಕೆಲಸ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ಸಮಯದಲ್ಲಿ, ರಸ್ತೆ ಬದಿಯಲ್ಲಿ ಇಬ್ಬರು ಅಪರಿಚಿತರು ನಿಂತಿದ್ದರು. ಅವರ ಮುಂದೆ ಬಿಳಿ ಬಟ್ಟೆ ಹಾಸಲಾಗಿದ್ದು, ಅದರ ಮೇಲೆ ದುರ್ವಾಸನೆ ಬೀರುತ್ತಿದ್ದ ಸತ್ತ ಹಾವಿನ ಕಳೇಬರವನ್ನು ಇಡಲಾಗಿತ್ತು.
ರಸ್ತೆಯಲ್ಲಿ ಸಂಚರಿಸುತ್ತಿದ್ದವರನ್ನು ಕರೆದು ಮಾತನಾಡಿದ ಆ ವ್ಯಕ್ತಿಗಳು, “ಪ್ರಯಾಣದ ವೇಳೆ ಸತ್ತ ನಾಗಹಾವು ಕಂಡುಬಂದಿದೆ. ಅದನ್ನು ಹಾಗೆಯೇ ಬಿಟ್ಟು ಹೋಗುವುದು ಸರಿಯಲ್ಲ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ ಸಹಾಯಧನ ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆಯಲು ಆರಂಭಿಸಿದ್ದರು ಎನ್ನಲಾಗಿದೆ.
ಆದರೆ ಸ್ಥಳೀಯರು ಅನುಮಾನಗೊಂಡು ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ ಪರಿಸ್ಥಿತಿ ಬದಲಾಗಿದೆ. “ಈ ಹಾವಿನ ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡಲಿದ್ದೀರಿ? ಪುರೋಹಿತರೊಂದಿಗೆ ಮಾತುಕತೆ ನಡೆದಿದೆಯೇ?” ಎಂದು ಕೆಲ ಹಿರಿಯರು ಪ್ರಶ್ನಿಸಿದಾಗ, ಆ ಇಬ್ಬರು ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಬಳಿಕ ಅವರು “ಸುರತ್ಕಲ್‌ನಲ್ಲಿ ಕಡಿಮೆ ವೆಚ್ಚದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ, ಅಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ” ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸ್ಥಳೀಯ ಆಟೋ ರಿಕ್ಷಾ ಚಾಲಕರೊಬ್ಬರು ಕೂಡ ಪ್ರಶ್ನಿಸಿ, “ನಮ್ಮ ಊರಿನಲ್ಲಿ ಸತ್ತ ಹಾವಿಗೆ ಇಲ್ಲಿನ ಜನರೇ ವ್ಯವಸ್ಥೆ ಮಾಡಬಹುದಿತ್ತು. ನೀವು ಹೊರಗಿನಿಂದ ಬಂದು ಹಣ ಸಂಗ್ರಹಿಸುವ ಅಗತ್ಯವೇನು?” ಎಂದು ಕೇಳಿದ್ದಾರೆ. ಈ ವೇಳೆ ಅವರ ವರ್ತನೆಯ ಬಗ್ಗೆ ಮತ್ತಷ್ಟು ಅನುಮಾನ ಮೂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನೊಬ್ಬ ಜಾಗೃತ ನಾಗರಿಕರು ಹಾವಿನ ಕಳೇಬರವನ್ನು ಪರಿಶೀಲಿಸಲು ಮುಂದಾದಾಗ, “ಅದನ್ನು ಮುಟ್ಟಬೇಡಿ” ಎಂದು ಆ ವ್ಯಕ್ತಿಗಳು ತೀವ್ರವಾಗಿ ತಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿದ್ದವರ ಅನುಮಾನ ಇನ್ನಷ್ಟು ಗಾಢವಾಗಿದೆ.
ಇದರ ಮಧ್ಯೆಯೇ ಹಲವರು ಧಾರ್ಮಿಕ ಭಾವನೆಯಿಂದ ಹಣ ನೀಡಿದ್ದರು. ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಸಾಕಷ್ಟು ಮೊತ್ತ ಸಂಗ್ರಹಿಸಿದ ಬಳಿಕ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಆ ಇಬ್ಬರು ಅಲ್ಲಿಂದ ನಾಪತ್ತೆಯಾಗಿದ್ದಾರೆ. ನಂತರ ಸ್ಥಳೀಯರು ವಿಚಾರಿಸಿದಾಗ, ಧಾರ್ಮಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಹಣ ಸಂಗ್ರಹಿಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಕೇವಲ ಎರಡೂವರೆ ಗಂಟೆಗಳ ಅವಧಿಯಲ್ಲಿ ಅಮಾಯಕ ಭಕ್ತರಿಂದ ಸುಮಾರು ₹10 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ವಂಚಕರು ಪರಾರಿಯಾಗಿರುವ ಸಾಧ್ಯತೆ ಇದೆ. ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಧರ್ಮದ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಗಳಿಂದ ಎಚ್ಚರ: ಮೋಸವಾಗದಿರಲು ಈ 8 ಎಚ್ಚರಿಕೆಗಳನ್ನು ತಿಳಿದುಕೊಳ್ಳಿ





