ಬಂಟ್ವಾಳ: ಬಿ.ಸಿ.ರೋಡ್ ಸಮೀಪದಲ್ಲಿ ಕಕ್ಯಪದವು ನಿವಾಸಿ ಲಾವಣ್ಯ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪೊಲೀಸರು ಇನ್ನಷ್ಟೇ ಸಂಪೂರ್ಣ ವಿಚಾರಣೆ ನಡೆಸಬೇಕಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಊಹಾಪೋಹ ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ, ಲಾವಣ್ಯ ಪ್ರತಿದಿನ ತನ್ನ ಮನೆಯ ಹತ್ತಿರದ ಪುತ್ತಿಲ ಪ್ರದೇಶದ ಬಸ್ ನಿಲ್ದಾಣದಿಂದ ಬಸ್ ಹತ್ತಿ ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದಳು. ಘಟನೆಗೆ ಕೆಲ ದಿನಗಳ ಮುನ್ನ ಆರೋಪಿ ಇದೇ ಪ್ರದೇಶದಲ್ಲಿ ತಿರುಗಾಡುತ್ತಿರುವುದನ್ನು ಕಂಡಿದ್ದೇವೆ ಎಂದು ಕೆಲವು ಸ್ಥಳೀಯರು ಅದರಲ್ಲೂ ವಿಶೇಷವಾಗಿ ಆಟೋ ಚಾಲಕರು ಮತ್ತು ಅಂಗಡಿ ಮಾಲೀಕರು ಹೇಳಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿ ಘಟನೆ ನಡೆದ ದಿನ ಮಾತ್ರವಲ್ಲ, ಅದಕ್ಕೂ ಮುನ್ನವೇ ಲಾವಣ್ಯಳ ದಿನಚರಿಯನ್ನು ಗಮನಿಸುತ್ತಿದ್ದನೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇನ್ನೊಂದು ಕಡೆ, ಆರೋಪಿ ಬೆಂಗಳೂರಿನಿಂದ ಊರಿಗೆ ಹಿಂದಿರುಗಿದ್ದ ವಿಚಾರವನ್ನು ಅವನ ಪೋಷಕರು ತಿಳಿದಿರಲಿಲ್ಲ ಎನ್ನಲಾಗುತ್ತಿದೆ. ಅವರು ಆತ ಬೆಂಗಳೂರಿನಲ್ಲೇ ಇದ್ದಾನೆ ಎಂದು ಭಾವಿಸಿದ್ದಾರಂತೆ.
ಈ ಅಂಶಗಳನ್ನು ಒಟ್ಟಾಗಿ ಪರಿಗಣಿಸಿದಾಗ, ಈ ಕೃತ್ಯ ಕ್ಷಣಿಕ ಆವೇಶದಲ್ಲಿ ನಡೆದದ್ದಲ್ಲ; ಮೊದಲೇ ಯೋಜನೆ ರೂಪಿಸಿ ನಡೆಸಿರುವ ಸಾಧ್ಯತೆ ಇದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ. ಆದರೆ ಈ ಎಲ್ಲವೂ ಪ್ರಾಥಮಿಕ ಮಾಹಿತಿಗಳು ಮಾತ್ರ. ಅಧಿಕೃತ ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.
ಆರೋಪಿ ಚೇತರಿಸಿಕೊಂಡ ಬಳಿಕ ಪೊಲೀಸರು ಸವಿಸ್ತಾರ ವಿಚಾರಣೆ ನಡೆಸಲಿದ್ದು, ಮೊಬೈಲ್ ಕರೆಗಳ ವಿವರ, ಸಂಚಾರದ ಮಾಹಿತಿ, ಸಾಕ್ಷಿಗಳ ಹೇಳಿಕೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಯಲಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಿಯ ನಿಜವಾದ ಉದ್ದೇಶ, ಪೂರ್ವಸಿದ್ಧತೆ ಮತ್ತು ಇತರೆ ಮಹತ್ವದ ಸಂಗತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಪೊಲೀಸರು ಯಾವುದೇ ಅಧಿಕೃತ ತೀರ್ಮಾನ ಪ್ರಕಟಿಸಿಲ್ಲ. ತನಿಖೆಯ ಅಂತಿಮ ವರದಿಯೇ ಈ ಪ್ರಕರಣದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.





