07 August 2026 |

ಮಂಗಳೂರಿನ 10ಕ್ಕೂ ಹೆಚ್ಚು ಬಾರ್‌ಗಳಲ್ಲಿ ಏಕಕಾಲದ ದಿಢೀರ್ ತಪಾಸಣೆ; ಕಾರಣವೇನು?

  • 07 Aug 2026 10:14:44 AM

ಮಂಗಳೂರು: ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ತಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಅಬಕಾರಿ ಇಲಾಖೆ ನಗರದಲ್ಲಿನ 10ಕ್ಕೂ ಹೆಚ್ಚು ಬಾರ್‌ ಹಾಗೂ ಪಬ್‌ಗಳ ಮೇಲೆ ಗುರುವಾರ ರಾತ್ರಿ ಏಕಕಾಲದಲ್ಲಿ ದಿಢೀರ್ ಪರಿಶೀಲನೆ ನಡೆಸಿತು.

 

ರಾತ್ರಿ 8ರಿಂದ 10.30ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಗ್ರಾಹಕರ ವಯೋಮಿತಿ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಯಾವುದೇ ನಿಯಮ ಉಲ್ಲಂಘನೆ ಪತ್ತೆಯಾಗಿಲ್ಲ. ಆದರೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ನೀಡಬಾರದು ಎಂದು ಬಾರ್‌ ಮಾಲೀಕರು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಡಿಕೆ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ತಿಳಿಸಿದ್ದಾರೆ.

 

ಇತ್ತೀಚೆಗೆ ಮಣಿಪಾಲದಲ್ಲಿ ಅಪ್ರಾಪ್ತರಿಗೆ ಮದ್ಯ ಪೂರೈಕೆ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ದಿಢೀರ್ ಪರಿಶೀಲನೆಗಳು ಮುಂದುವರಿಯಲಿವೆ ಎಂದು ಇಲಾಖೆ ತಿಳಿಸಿದೆ.

 

ಬಾರ್‌ಗಳಲ್ಲಿ ಪಾನ್‌, ಆಧಾರ್‌, ಚಾಲನಾ ಪರವಾನಗಿ ಮೊದಲಾದ ಸರ್ಕಾರಿ ಗುರುತಿನ ಚೀಟಿಗಳ ಮೂಲಕ ವಯಸ್ಸು ಪರಿಶೀಲಿಸುವುದು ಕಡ್ಡಾಯವಾಗಿದ್ದು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ನೀಡುವುದಿಲ್ಲ ಎಂಬ ಸೂಚನಾ ಫಲಕಗಳನ್ನು ಪ್ರದರ್ಶಿಸಬೇಕೆಂದು ಇಲಾಖೆ ನಿರ್ದೇಶನ ನೀಡಿದೆ. ಪರಿಶೀಲನೆ ವೇಳೆ ಮಾದಕ ವಸ್ತು ಬಳಕೆಯ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.