11 August 2026 |

ಸಹೋದರಿಯ ಸಾವಿನ ಆಘಾತ; ದುಬೈ ಉದ್ಯೋಗಿಯಾಗಿದ್ದ 24 ವರ್ಷದ ಯುವಕ ಮಂಗಳೂರಿನ ಹೋಟೆಲ್‌ನಲ್ಲಿ ಮೃತ

  • 11 Aug 2026 10:24:44 AM

ಮಂಗಳೂರು: ಸಹೋದರಿಯ ಸಾವಿನ ಆಘಾತದಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾದ ದುಬೈ ಮೂಲದ ಉದ್ಯೋಗಿಯೊಬ್ಬರು ಮಂಗಳೂರಿನ ಹೋಟೆಲ್‌ವೊಂದರಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

 

ಕಾಸರಗೋಡು ಮೂಲದ ಅರ್ಜುನ್ ಮಹೇಶ್ (24) ಮೃತ ಯುವಕ. ದುಬೈನಲ್ಲಿ ನಿಸಾನ್ ಕಂಪನಿಯಲ್ಲಿ ಆಟೋಮೊಬೈಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚೆಗೆ ಕುಟುಂಬದವರಿಗೆ ಮಾಹಿತಿ ನೀಡದೆ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.

 

ಎರಡು ತಿಂಗಳ ಹಿಂದೆ ಅರ್ಜುನ್ ಅವರ ಸಹೋದರಿ ಐಜಾ ಮಹೇಶ್ (19) ಅವರು NEET ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಅರ್ಜುನ್ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.

 

ಸಹೋದರಿಯ ಅಂತ್ಯಕ್ರಿಯೆ ಬಳಿಕ ದುಬೈಗೆ ತೆರಳಿ ಕೆಲಸಕ್ಕೆ ಹಾಜರಾಗಿದ್ದ ಅರ್ಜುನ್, ಕೆಲವೇ ದಿನಗಳಲ್ಲಿ ಮತ್ತೆ ಮಂಗಳೂರಿಗೆ ಬಂದಿದ್ದರು. ಭಾನುವಾರ ಶಾರ್ಜಾದಿಂದ ಮಂಗಳೂರಿಗೆ ಆಗಮಿಸಿದ ಅವರು ಮರವೂರಿನ ಸ್ಕೈ ಗ್ರ್ಯಾಂಡ್ ಎಂಪೈರ್ ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದರು.

 

ನಂತರ ಕೊಠಡಿಯಿಂದ ಹೊರಬಾರದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿದೆ. ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಬಜ್ಪೆ ಪೊಲೀಸರು ಪರಿಶೀಲನೆ ನಡೆಸಿದಾಗ ಅರ್ಜುನ್ ಮೃತಪಟ್ಟಿರುವುದು ಪತ್ತೆಯಾಗಿದೆ.

 

ಕೊಠಡಿಯಲ್ಲಿ ಕುಟುಂಬದವರನ್ನು ಉದ್ದೇಶಿಸಿ ಬರೆದಿದ್ದ ಚೀಟಿಯೊಂದು ಪತ್ತೆಯಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಸಹೋದರಿಯ ಸಾವಿನ ಬಳಿಕ ಮತ್ತೊಂದು ಆಘಾತ

ಅರ್ಜುನ್ ಅವರ ಸಹೋದರಿ ಐಜಾ ಅವರು NEET ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಪರೀಕ್ಷೆ ರದ್ದಾದ ಬಳಿಕ ಮರುಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಜೂನ್‌ನಲ್ಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಐಜಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

 

ಸಹೋದರಿಯ ಸಾವಿನಿಂದ ನೊಂದಿದ್ದ ಅರ್ಜುನ್ ಕೂಡ ಮಾನಸಿಕವಾಗಿ ಸಂಕಷ್ಟದಲ್ಲಿದ್ದರು ಎನ್ನಲಾಗಿದ್ದು, ಇದೀಗ ಅವರ ಸಾವಿನಿಂದ ಕಾಸರಗೋಡು ಮೂಲದ ಕುಟುಂಬ ಮತ್ತಷ್ಟು ಆಘಾತಕ್ಕೊಳಗಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.