11 August 2026 |

ಮುಂಗಾರು ಅಬ್ಬರಕ್ಕೆ ಹಿಮಾಚಲ ತತ್ತರ: 259 ರಸ್ತೆಗಳು ಬಂದ್, 157 ಮಂದಿ ಸಾವು

  • 11 Aug 2026 03:09:18 PM

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ, ಭೂಕುಸಿತ ಹಾಗೂ ಇತರ ಪ್ರಕೃತಿ ವಿಕೋಪಗಳಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಒಟ್ಟು 259 ರಸ್ತೆಗಳು ಸಂಚಾರಕ್ಕೆ ಬಂದ್ ಆಗಿದ್ದು, ಮಳೆ ಸಂಬಂಧಿತ ವಿವಿಧ ಘಟನೆಗಳಲ್ಲಿ ಈವರೆಗೆ 157 ಮಂದಿ ಮೃತಪಟ್ಟಿದ್ದಾರೆ.

 

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ವರದಿ ಪ್ರಕಾರ, ಜೂನ್ 30ರಿಂದ ಆಗಸ್ಟ್ 9ರವರೆಗೆ ಸುರಿದ ಭಾರೀ ಮಳೆಯಿಂದ ಸುಮಾರು 900 ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಹಾನಿಯಾಗಿದೆ. ಇದರಿಂದ ಅಂದಾಜು 886 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

 

ಭೂಕುಸಿತ ಮತ್ತು ಹಠಾತ್ ಪ್ರವಾಹದಂತಹ ಘಟನೆಗಳಲ್ಲಿ 68 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ರಸ್ತೆ ಅಪಘಾತಗಳಲ್ಲಿ 89 ಜನರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 257 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

 

ಮಳೆಯ ಸಂಕಷ್ಟದಿಂದ ರಾಜ್ಯ ಇನ್ನೂ ಹೊರಬಂದಿಲ್ಲ. ಮುಂದಿನ ದಿನಗಳಲ್ಲಿಯೂ ಐದು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ.