11 August 2026 |

ಮಂಗಳೂರು: ಚಲಿಸುವ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ: ಪಾಯಿಂಟ್ಸ್‌ಮ್ಯಾನ್‌ ಸಮಯಪ್ರಜ್ಞೆಗೆ ಮೆಚ್ಚುಗೆ

  • 11 Aug 2026 11:54:17 AM

ಮಂಗಳೂರು: ಚಲಿಸುತ್ತಿದ್ದ ರೈಲಿಗೆ ಹತ್ತಲು ಮುಂದಾಗಿ ಆಯತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲು ಬೋಗಿಯ ನಡುವಿನ ಅಂತರಕ್ಕೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ರಕ್ಷಿಸಿದ್ದಾರೆ. ಸೋಮವಾರ (ಆಗಸ್ಟ್ 10) ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

 

ಸುರತ್ಕಲ್ ನಿಲ್ದಾಣಕ್ಕೆ ಆಗಮಿಸಿದ್ದ ರೈಲು ಸಂಖ್ಯೆ 10107 ಮಡಗಾಂವ್–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ಹೊರಡಲು ಆರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕನೊಬ್ಬ ರೈಲಿಗೆ ಏರಲು ತುರಾತುರಿಯಲ್ಲಿ ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಆಳವಾದ ಅಂತರಕ್ಕೆ ಬೀಳುವ ಅಪಾಯ ಎದುರಾಗಿದೆ.

 

ಘಟನೆಯನ್ನು ಗಮನಿಸಿದ ಕರ್ತವ್ಯನಿರತ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ಯಾವುದೇ ಸಮಯ ವ್ಯರ್ಥ ಮಾಡದೆ ತಕ್ಷಣ ಪ್ರಯಾಣಿಕನ ನೆರವಿಗೆ ಧಾವಿಸಿದ್ದಾರೆ. ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಕನನ್ನು ಬಿಗಿಯಾಗಿ ಹಿಡಿದು ಪ್ಲಾಟ್‌ಫಾರ್ಮ್‌ ಮೇಲೆ ಸುರಕ್ಷಿತವಾಗಿ ಎಳೆದುಕೊಂಡು ಬಂದಿದ್ದಾರೆ.

 

ಸಂದೀಪ್ ನಾಯಕ್ ಅವರ ಕ್ಷಿಪ್ರ ನಿರ್ಧಾರ ಮತ್ತು ಧೈರ್ಯದಿಂದಾಗಿ ಸಂಭವಿಸಬಹುದಾಗಿದ್ದ ಗಂಭೀರ ಅಪಘಾತವೊಂದು ತಪ್ಪಿದೆ. ಅವರ ಕರ್ತವ್ಯನಿಷ್ಠೆ, ಚುರುಕುತನ ಹಾಗೂ ಸಾಹಸಕ್ಕೆ ಸುರತ್ಕಲ್ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಕೊಂಕಣ ರೈಲ್ವೆ ವಿಭಾಗ ಮತ್ತು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 

ಪ್ರಯಾಣಿಕನ ಜೀವ ಉಳಿಸಿದ ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆಯನ್ನು ಕೊಂಕಣ ರೈಲ್ವೆಯೂ ಶ್ಲಾಘಿಸಿದೆ. ಅವರ ಸಾಹಸವನ್ನು ಗುರುತಿಸಿ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ₹10,000 ನಗದು ಬಹುಮಾನ ಘೋಷಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.