13 August 2026 |

ಸಕಲೇಶಪುರ ಘಾಟ್‌ನಲ್ಲಿ ‘ವಂದೇ ಭಾರತ್ ರೈಲು’ ಪರೀಕ್ಷಾರ್ಥ ಸಂಚಾರ ಯಶಸ್ವಿ

  • 12 Aug 2026 05:33:43 PM

ಮಂಗಳೂರು: ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವ ನಿರೀಕ್ಷೆಗೆ ಮತ್ತಷ್ಟು ಬಲ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ರೈಲು ಮಾರ್ಗದಲ್ಲಿ ಬುಧವಾರ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ನಡೆಸಲಾಯಿತು.

 

ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಘಾಟ್ ಪ್ರದೇಶದ ಕಠಿಣ ಏರು-ಇಳಿಜಾರು ಮಾರ್ಗದಲ್ಲಿ ರೈಲಿನ ಸಂಚಾರವನ್ನು ಪರಿಶೀಲಿಸಲಾಯಿತು. ಕಿತ್ತಳೆ ಬಣ್ಣದ ವಂದೇ ಭಾರತ್ ರೈಲು ವಿವಿಧ ಹಂತಗಳಲ್ಲಿ ಸಂಚರಿಸುವ ಮೂಲಕ ಅದರ ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.

 

ಪ್ರಯಾಣಿಕರ ಬದಲು ರೈಲಿನ ಬೋಗಿಗಳಲ್ಲಿ ಮರಳಿನ ಚೀಲಗಳನ್ನು ಇರಿಸಿ, ನಿಗದಿತ ವೇಗದಲ್ಲಿ ಸಂಚಾರ ನಡೆಸಲಾಯಿತು. ಈ ಮೂಲಕ ಹೆಚ್ಚಿನ ಭಾರದ ಸಂದರ್ಭದಲ್ಲಿ ರೈಲಿನ ಕಾರ್ಯಕ್ಷಮತೆ ಹೇಗಿರುತ್ತದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

 

ಘಾಟ್ ಮಾರ್ಗದಲ್ಲಿ ರೈಲಿನ ಸುರಕ್ಷತೆ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ವಿವಿಧ ವೇಗಗಳಲ್ಲಿ ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹಂತ ಹಂತವಾಗಿ ವೇಗವನ್ನು ಹೆಚ್ಚಿಸಿ, ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲು ಸೂಕ್ತವಾಗಿರುವ ಗರಿಷ್ಠ ವೇಗವನ್ನು ನಿರ್ಧರಿಸುವ ಪ್ರಕ್ರಿಯೆ ನಡೆಯುತ್ತಿದೆ.

 

ಪರೀಕ್ಷಾರ್ಥ ರೈಲು ಸಕಲೇಶಪುರ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಪೂಜೆ ನೆರವೇರಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

 

ಬೆಂಗಳೂರು–ಮಂಗಳೂರು ನಡುವೆ ವಂದೇ ಭಾರತ್ ಸೇವೆ ಆರಂಭಿಸಬೇಕು ಎಂಬ ಕರಾವಳಿ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ಈ ಪರೀಕ್ಷಾರ್ಥ ಸಂಚಾರಕ್ಕೆ ವಿಶೇಷ ಮಹತ್ವ ದೊರೆತಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್ ತಂತ್ರಜ್ಞಾನ ಹೊಂದಿರುವ 20 ಬೋಗಿಗಳ ವಂದೇ ಭಾರತ್ ರೈಲನ್ನು ಪರೀಕ್ಷೆಗಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಿಂದ ತರಲಾಗಿದೆ.

 

ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಪ್ರದೇಶವು ಕಡಿದಾದ ಏರು-ಇಳಿಜಾರು ಮತ್ತು ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿದೆ. ಹೀಗಾಗಿ ಪ್ರಯಾಣಿಕರ ಸೇವೆ ಆರಂಭಿಸುವ ಮೊದಲು ಈ ಮಾರ್ಗದಲ್ಲಿ ರೈಲಿನ ಸುರಕ್ಷಿತ ಸಂಚಾರ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಪರೀಕ್ಷೆಯ ಪ್ರಮುಖ ಉದ್ದೇಶವಾಗಿದೆ. ಅಗತ್ಯ ತಾಂತ್ರಿಕ ಮಾನದಂಡಗಳನ್ನು ನಿಗದಿಪಡಿಸಿದ ಬಳಿಕ ಮುಂದಿನ ಹಂತದ ಪ್ರಕ್ರಿಯೆ ಕೈಗೊಳ್ಳುವ ನಿರೀಕ್ಷೆಯಿದೆ.