ಶಾಲೆಯಿಂದ ಮನೆಗೆ ಬಂದ ಅಣ್ಣನನ್ನು ನೋಡಲು ಸಂತೋಷದಿಂದ ಓಡಿ ಬಂದ ಮೂರು ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ವಿಜಯಪುರ ನಗರದ ಕೈಗಾರಿಕಾ ಪ್ರದೇಶದ ಶಿಫಾ ಸುಹಾಸ ವಾಡಿ (3) ಎಂದು ಗುರುತಿಸಲಾಗಿದೆ. ಈ ಹೃದಯವಿದ್ರಾವಕ ಘಟನೆ ಮಂಗಳವಾರ ನಡೆದಿದೆ.
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಅಣ್ಣ ಸಂಜೆ ಶಾಲಾ ಬಸ್‌ನಲ್ಲಿ ಮನೆಗೆ ಬಂದಿದ್ದ. ಅಣ್ಣ ಬಸ್‌ನಿಂದ ಇಳಿಯುತ್ತಿದ್ದುದನ್ನು ಕಂಡ ಶಿಫಾ ಆತನನ್ನು ನೋಡಲು ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಬಸ್‌ನ ಮುಂಭಾಗದ ಮೂಲಕ ಅಣ್ಣನತ್ತ ತೆರಳುತ್ತಿದ್ದ ವೇಳೆ, ಚಾಲಕನ ಗಮನಕ್ಕೆ ಬಾಲಕಿ ಬಂದಿಲ್ಲ ಎನ್ನಲಾಗಿದೆ.
ಚಾಲಕ ಬಸ್‌ನ್ನು ಮುಂದಕ್ಕೆ ಚಲಾಯಿಸಿದಾಗ ಮುಂಭಾಗದ ಚಕ್ರದಡಿ ಬಾಲಕಿ ಸಿಲುಕಿದ್ದಾಳೆ. ಗಂಭೀರವಾಗಿ ಗಾಯಗೊಂಡ ಶಿಫಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಣ್ಣೆದುರೇ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





