ಮಂಗಳೂರು: ನಗರದ ಹೊರವಲಯದ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಸಮೀಪ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕಸಬಾ ಬೆಂಗ್ರೆಯ ಮುಹಮ್ಮದ್ ಸಾಲಿ ಹಾಗೂ ಝಹುರಾ ದಂಪತಿಯ ಪುತ್ರ ಮುಹಮ್ಮದ್ ಸನಾವುಲ್ಲಾ ಎಂದು ಗುರುತಿಸಲಾಗಿದೆ.
ಫೆರಿ ಪಾಯಿಂಟ್ ಬಳಿ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ವೇಳೆ ಚೆಂಡು ನದಿಗೆ ಬಿದ್ದಿತ್ತು. ಚೆಂಡನ್ನು ನೀರಿನಿಂದ ತೆಗೆದುಕೊಡಲು ಸನಾವುಲ್ಲಾ ನದಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ಘಟನೆ ತಿಳಿದ ಸ್ಥಳೀಯರು ತಕ್ಷಣ ಹುಡುಕಾಟ ನಡೆಸಿ ಸನಾವುಲ್ಲಾ ಅವರನ್ನು ನೀರಿನಿಂದ ಮೇಲಕ್ಕೆತ್ತಿದರು. ಬಳಿಕ ಪ್ರಥಮ ಚಿಕಿತ್ಸೆ ನೀಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.





