ಮಂಗಳೂರು: ಸರ್ಕಾರಿ ಲೇಡಿ ಗೋಶೆನ್ ಆಸ್ಪತ್ರೆಯಲ್ಲಿ ಏಳು ತಿಂಗಳ ಗರ್ಭಿಣಿಯೊಬ್ಬರಿಗೆ ತುರ್ತು ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರ ತಂಡ ಯಶಸ್ವಿಯಾಗಿ ಜೀವ ಉಳಿಸಿದೆ.
ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯೊಬ್ಬರು ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಹೊಟ್ಟೆಯೊಳಗೆ ಹೆಚ್ಚಿನ ಪ್ರಮಾಣದ ರಕ್ತಸ್ರಾವವಾಗಿರುವುದು ಹಾಗೂ ಅವರ ಹಿಮೋಗ್ಲೋಬಿನ್ ಮಟ್ಟ 6 ಗ್ರಾಂಗೆ ಕುಸಿದಿರುವುದು ತಿಳಿದುಬಂದಿತು. ಮತ್ತಷ್ಟು ತಪಾಸಣೆ ನಡೆಸಿದಾಗ ಹಿಂದಿನ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಗಾಯದ ಸ್ಥಳದಲ್ಲಿ ಹರಿತ ಉಂಟಾಗಿರುವುದು ಮತ್ತು ಪ್ಲಾಸೆಂಟಾ ಪೆರ್ಕ್ರೆಟಾ ಎಂಬ ಗಂಭೀರ ಗರ್ಭಧಾರಣೆಯ ತೊಂದರೆ ಇರುವುದು ಪತ್ತೆಯಾಯಿತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆಸ್ಪತ್ರೆಯ ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ ಹಾಗೂ ಅರಿವಳಿಕೆ ವಿಭಾಗಗಳ ತಜ್ಞರು ಒಗ್ಗೂಡಿ ತುರ್ತು ಚಿಕಿತ್ಸೆ ಕೈಗೊಂಡರು. ಬೆಳಗ್ಗೆ ಸುಮಾರು 5 ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ 9 ಗಂಟೆಯವರೆಗೆ ಮುಂದುವರಿಯಿತು. ಸತತ ಪ್ರಯತ್ನದ ಬಳಿಕ ವೈದ್ಯರು ಮಹಿಳೆಯ ಜೀವವನ್ನು ಸುರಕ್ಷಿತವಾಗಿ ಉಳಿಸುವಲ್ಲಿ ಯಶಸ್ವಿಯಾದರು.
ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ ವಿವಿಧ ವಿಭಾಗಗಳ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದು, ಈ ಯಶಸ್ವಿ ಚಿಕಿತ್ಸೆ ಮಂಗಳೂರಿನ ವೈದ್ಯಕೀಯ ಕ್ಷೇತ್ರದ ಗಮನಾರ್ಹ ಸಾಧನೆಯಾಗಿ ಗುರುತಿಸಿಕೊಂಡಿದೆ.





