ಬಂಟ್ವಾಳ: ಸಾಮಾನ್ಯವಾಗಿ ಪೌರಕಾರ್ಮಿಕರು ಸರಳ ಜೀವನ ನಡೆಸುವುದನ್ನು ಕಾಣುತ್ತೇವೆ. ಆದರೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಸೇಸಪ್ಪ ಅವರ ಬದುಕಿನ ಪಯಣ ವಿಭಿನ್ನವಾಗಿದೆ. ಬಂಟ್ವಾಳ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಇದೀಗ ಲಕ್ಷಾಂತರ ರೂ. ಮೌಲ್ಯದ ಫಾರ್ಚುನರ್ ಕಾರಿನಲ್ಲಿ ಕೆಲಸಕ್ಕೆ ಆಗಮಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಬಡತನದ ನಡುವೆಯೂ ದೊಡ್ಡ ಕನಸು
ಸೇಸಪ್ಪ ಅವರು 1996ರಲ್ಲಿ ದಿನಕ್ಕೆ 50 ರೂ. ಕೂಲಿಯ ನೌಕರರಾಗಿ ಬಂಟ್ವಾಳ ಪುರಸಭೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಸೇರ್ಪಡೆಯಾದರು. ಆರಂಭದ ದಿನಗಳಲ್ಲಿ ಅವರ ಸಂಚಾರಕ್ಕೆ ಸೈಕಲ್‌ವೇ ಆಧಾರವಾಗಿತ್ತು. ಸುಮಾರು ಐದು ವರ್ಷಗಳ ಕಾಲ ಸೈಕಲ್‌ನಲ್ಲೇ ಕೆಲಸಕ್ಕೆ ತೆರಳುತ್ತಿದ್ದರು.
ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಉತ್ತಮ ಬದುಕಿನ ಕನಸು ಮಾತ್ರ ಅವರಲ್ಲಿ ಕಡಿಮೆಯಾಗಿರಲಿಲ್ಲ. ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಕಾರುಗಳಲ್ಲಿ ಸಂಚರಿಸುವವರನ್ನು ನೋಡುತ್ತಿದ್ದ ಅವರು, ಒಂದು ದಿನ ತಮ್ಮ ಕುಟುಂಬವೂ ಕಾರಿನಲ್ಲಿ ಓಡಾಡಬೇಕು ಎಂಬ ಆಸೆ ಬೆಳೆಸಿಕೊಂಡಿದ್ದರು. ವರ್ಷಗಳ ಪರಿಶ್ರಮದ ಬಳಿಕ ಆ ಕನಸು ಈಗ ಫಾರ್ಚುನರ್ ಕಾರಿನ ರೂಪದಲ್ಲಿ ನನಸಾಗಿದೆ.
ಸೇಸಪ್ಪ ಅವರ ಪ್ರಕಾರ, ಪುರಸಭೆಯಲ್ಲಿ ಕೆಲಸ ಆರಂಭಿಸಿದಾಗ 50 ರೂ. ಕೂಲಿ ಸಿಗುತ್ತಿತ್ತು. ಆ ಸಮಯದಲ್ಲಿ ಸೈಕಲ್ ಖರೀದಿಸಿಕೊಂಡಿದ್ದರು. ಕೆಲ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿದ್ದ ಪರಿಸ್ಥಿತಿ ಇತ್ತು. ನಂತರ ಪುರಸಭೆಯಲ್ಲಿ ಖಾಯಂ ನೌಕರರಾದ ಬಳಿಕ ಕಾರು ಖರೀದಿಸುವ ಆಸೆ ಹೆಚ್ಚಾಯಿತು.
ಮೊದಲಿಗೆ ಮಾರುತಿ 800 ಕಾರು ಖರೀದಿಸಿದ ಅವರು, ನಂತರ ಅದನ್ನು ಬದಲಿಸಿ ಮಾರುತಿ ಆಲ್ಟೋ, ಬಳಿಕ ಸ್ವಿಫ್ಟ್ ಕಾರುಗಳನ್ನು ಬಳಸಿದರು. ಮಗನ ಅನುಕೂಲಕ್ಕಾಗಿ ಸ್ಕಾರ್ಪಿಯೋ ಕಾರನ್ನೂ ಖರೀದಿಸಿದರು. ಇತ್ತೀಚೆಗೆ ಸ್ಕಾರ್ಪಿಯೋವನ್ನು ಮಾರಾಟ ಮಾಡಿ 2013ರ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಖರೀದಿಸಿದ್ದಾರೆ. ತಮ್ಮ ಎಲ್ಲ ಕಾರುಗಳನ್ನೂ ಸಾಲದ ಮೂಲಕವೇ ಖರೀದಿಸಿರುವುದಾಗಿ ಸೇಸಪ್ಪ ತಿಳಿಸಿದ್ದಾರೆ.
ಕುಟುಂಬದ ಜವಾಬ್ದಾರಿಯ ಜೊತೆಗೆ ಹಲವು ಕೆಲಸ
ಸೇಸಪ್ಪ ಅವರ ಕುಟುಂಬದಲ್ಲಿ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಪುತ್ರ ದೈವ ನೇಮದ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಒಬ್ಬರು ಉದ್ಯೋಗದಲ್ಲಿದ್ದು, ಮತ್ತೊಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸೇಸಪ್ಪ ಅವರ ದಿನಚರಿಯೂ ಸಾಕಷ್ಟು ಕಾರ್ಯನಿರತವಾಗಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡ್‌ಗೆ ತೆರಳಿ ಸ್ವಚ್ಛತಾ ಕಾರ್ಯ ಆರಂಭಿಸುವ ಅವರು ಮಧ್ಯಾಹ್ನ 12ರವರೆಗೆ ಕರ್ತವ್ಯ ನಿರ್ವಹಿಸುತ್ತಾರೆ. ರಸ್ತೆಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಪುರಸಭೆಯ ಇತರ ಕೆಲಸಗಳನ್ನೂ ಮಾಡುತ್ತಾರೆ.
ಪುರಸಭೆಯ ಕರ್ತವ್ಯ ಮುಗಿದ ಬಳಿಕವೂ ಅವರ ಕೆಲಸ ನಿಲ್ಲುವುದಿಲ್ಲ. ಉಳಿದ ಸಮಯದಲ್ಲಿ ಕೂಲಿ ಕೆಲಸಕ್ಕೆ ತೆರಳುವ ಅವರು ಮನೆಯಲ್ಲಿ ದನಗಳನ್ನೂ ಸಾಕುತ್ತಿದ್ದಾರೆ. ಇದರ ಜತೆಗೆ ಮನೆಯ ಸಮೀಪದ ಪಂಚಾಯಿತಿಯ ನೀರು ಸರಬರಾಜು ಕೆಲಸದಲ್ಲೂ ಸಹಕರಿಸುತ್ತಿದ್ದಾರೆ.
ಬಡತನದ ಹಿನ್ನೆಲೆಯಿಂದ ಬಂದರೂ ನಿರಂತರ ಪರಿಶ್ರಮ, ದುಡಿಮೆ ಮತ್ತು ಕನಸನ್ನು ಸಾಕಾರಗೊಳಿಸುವ ಛಲದಿಂದ ಜೀವನದಲ್ಲಿ ಮುಂದೆ ಬಂದಿರುವ ಸೇಸಪ್ಪ ಅವರ ಕಥೆ, ದುಡಿಯುವ ಮನಸ್ಸಿದ್ದರೆ ಗುರಿ ತಲುಪಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.





