24 August 2026 |

ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ ಆರೋಪ, ವ್ಯಕ್ತಿ ಬಂಧನ

  • 24 Aug 2026 09:35:51 AM

ಬೆಳ್ತಂಗಡಿ: ವ್ಯಕ್ತಿಯೊಬ್ಬರಿಗೆ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಶರತ್ (33) ಎಂಬಾತನನ್ನು ಬಂಧಿಸಿದ್ದಾರೆ.

 

ಬೆಳ್ತಂಗಡಿ ತಾಲೂಕಿನ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ದೂರಿನ ಪ್ರಕಾರ, ಧರ್ಮಸ್ಥಳದ ನಿವಾಸಿ ಶರತ್ ಕೆಲವು ತಿಂಗಳ ಹಿಂದೆ ವಾಹನದಿಂದ ಡಿಕ್ಕಿ ಹೊಡೆದು ಕೊಲೆ ಮಾಡುವುದಾಗಿ ಬಾಲಕೃಷ್ಣ ಅವರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

 

ಜುಲೈ 30ರಂದು ಸಂಜೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಬಾಲಕೃಷ್ಣ ಅವರನ್ನು ಶರತ್ ಟಾಟಾ ಸುಮೊ (KA 05 AD 6341) ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಳಿಕ ಧರ್ಮಸ್ಥಳ ಗ್ರಾಮದ ಕುರುಮಾನಿ ಕ್ರಾಸ್ ಬಳಿ ಅವರ ದ್ವಿಚಕ್ರ ವಾಹನಕ್ಕೆ ಟಾಟಾ ಸುಮೊದಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಘಟನೆಯಲ್ಲಿ ಬಾಲಕೃಷ್ಣ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 52/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 109ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಆಗಸ್ಟ್ 22ರಂದು ಶರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.