04 September 2026 |

ಸರಕಾರಿ ಬಸ್‌ಗಳ ಕೊರತೆ: ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ

  • 03 Sep 2026 06:03:52 PM

ಬೆಳ್ತಂಗಡಿ: ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಜಾರಿಯಾದ ಬಳಿಕ ಸಾರ್ವಜನಿಕರಿಗೆ ಅನುಕೂಲವಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ವಿಶೇಷವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಬಸ್‌ಗಳಲ್ಲಿ ವಿಪರೀತ ಜನದಟ್ಟಣೆ ಕಂಡುಬರುತ್ತಿದ್ದು, ವಿದ್ಯಾರ್ಥಿಗಳು ಬಸ್‌ ಬಾಗಿಲು ಹಾಗೂ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ನೆರಿಯ, ಚಾರ್ಮಾಡಿ, ದಿಡುಪೆ, ಗಂಡಿಬಾಗಿಲು ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರತಿದಿನ ಬೆಳ್ತಂಗಡಿ ಕಡೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಬೆಳಗ್ಗೆ ಶಾಲೆ, ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ಸಮಯದಲ್ಲಿ ಅಗತ್ಯ ಪ್ರಮಾಣದ ಬಸ್‌ಗಳು ಇಲ್ಲದ ಕಾರಣ, ಲಭ್ಯವಿರುವ ಬಸ್‌ಗಳಲ್ಲೇ ಪ್ರಯಾಣಿಕರು ಕಿಕ್ಕಿರಿದು ಸಾಗಬೇಕಾಗಿದೆ. ಸಂಜೆ ಮನೆಗೆ ಮರಳುವ ಸಂದರ್ಭದಲ್ಲೂ ಇದೇ ಸಮಸ್ಯೆ ಮುಂದುವರಿಯುತ್ತಿದೆ.

 

ತಾಲೂಕಿನ ನೆರಿಯ, ಕಾಯರ್ತಡ್ಕ, ಗಂಡಿಬಾಗಿಲು, ದೇವಗಿರಿ, ಕೊಯ್ಯರು, ಬೈಪಾಡಿ, ಬೆಳಾಲು, ದಿಡುಪೆ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ಖಾಸಗಿ ಸಾರಿಗೆ ಸೌಲಭ್ಯ ಸೀಮಿತವಾಗಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರು ಕೆಂಪು ಬಸ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

 

ಬೆಳಗ್ಗೆ ಬೆಳ್ತಂಗಡಿ ಕಡೆಗೆ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಒಂದು ಬಸ್‌ ತಪ್ಪಿದರೆ ಮುಂದಿನ ಬಸ್‌ಗಾಗಿ ಕಾಯಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿಗೆ ತಡವಾಗಿ ತಲುಪುವ ಸ್ಥಿತಿ ಎದುರಾಗುತ್ತಿದೆ. ಸಂಜೆ ತರಗತಿಗಳು ಮುಗಿಯುವ ವೇಳೆಯಲ್ಲೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇಲ್ಲ. ಪರಿಣಾಮವಾಗಿ ಒಂದೇ ಬಸ್‌ನಲ್ಲಿ ನೂರಾರು ಮಂದಿ ಪ್ರಯಾಣಿಸುವಂತಾಗಿದೆ.

 

ಸಂಜೆಯ ವೇಳೆಯಲ್ಲೂ ಪ್ರಯಾಣಿಕರ ಪರದಾಟ

ನೆರಿಯ ಭಾಗಕ್ಕೆ ಸಂಜೆ 5.10ಕ್ಕೆ ಬಸ್‌ ಇದ್ದು, ಅದರ ಬಳಿಕ 6.45ಕ್ಕೆ ಮತ್ತೊಂದು ಬಸ್‌ ಲಭ್ಯವಾಗುತ್ತದೆ. 5.10ರ ಬಸ್‌ ಸಾಮಾನ್ಯವಾಗಿ ಪ್ರಯಾಣಿಕರಿಂದ ತುಂಬಿರುತ್ತದೆ. ಈ ಬಸ್‌ ತಪ್ಪಿದರೆ ಮುಂದಿನ ಬಸ್‌ ಬರುವವರೆಗೆ ದೀರ್ಘ ಸಮಯ ಕಾಯಬೇಕಾಗಿದ್ದು, ಮನೆ ತಲುಪುವಷ್ಟರಲ್ಲಿ ರಾತ್ರಿ ಆಗುವ ಪರಿಸ್ಥಿತಿ ಇದೆ.

 

ಕಿಲ್ಲೂರು, ಬಂಗಾಡಿ ಮತ್ತು ಕೊಲ್ಲಿ ಭಾಗಗಳಿಗೂ ಸಂಜೆ 5.15ರ ನಂತರ ಕೆಎಸ್ಸಾರ್ಟಿಸಿ ಬಸ್‌ಗಳ ಸೌಲಭ್ಯ ಇಲ್ಲ. ಬೈಲಡ್ಕ, ಸವಣಾಲು ಹಾಗೂ ಶಿರ್ಲಾಲು ಭಾಗಗಳಿಗೆ ಸಂಜೆ 5 ಗಂಟೆಯೇ ಕೊನೆಯ ಬಸ್‌ ಆಗಿದೆ. ದಿಡುಪೆ ಕಡೆಗೆ ಸಂಜೆ 5.30 ಮತ್ತು 6.45ಕ್ಕೆ ಬಸ್‌ಗಳಿದ್ದರೂ, ಶಾಲಾ-ಕಾಲೇಜುಗಳು ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಈ ಬಸ್‌ಗಳು ಸಾಕಾಗುತ್ತಿಲ್ಲ.

 

ತಾಲೂಕಿನ ಹಲವು ಗ್ರಾಮೀಣ ಭಾಗಗಳಲ್ಲಿ ಇದೇ ರೀತಿಯ ಸಾರಿಗೆ ಸಮಸ್ಯೆ ಎದುರಾಗಿದ್ದು, ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

 

ಅಪಾಯದ ನಡುವೆಯೇ ಪ್ರಯಾಣ

ಬಸ್‌ನಲ್ಲಿ ಕುಳಿತುಕೊಳ್ಳಲು ಅಥವಾ ನಿಲ್ಲಲು ಸ್ಥಳವಿಲ್ಲದಿದ್ದರೂ ಮನೆ ತಲುಪಲೇಬೇಕಾದ ಅನಿವಾರ್ಯತೆಯಿಂದ ಹಲವು ವಿದ್ಯಾರ್ಥಿಗಳು ಬಸ್‌ ಬಾಗಿಲಿನ ಬಳಿ ನಿಂತುಕೊಂಡು ಹಾಗೂ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಜಾರುವಿಕೆ ಹೆಚ್ಚಾಗುವುದರಿಂದ ಇಂತಹ ಪ್ರಯಾಣ ಮತ್ತಷ್ಟು ಅಪಾಯಕಾರಿಯಾಗಿದೆ.

 

ಇತ್ತೀಚೆಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಬೆಳ್ತಂಗಡಿಗೆ ಬರುತ್ತಿದ್ದ ವೇಳೆ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಅಕ್ಕ-ತಂಗಿ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಕೂಡ ನಡೆದಿತ್ತು. ಇಂತಹ ಘಟನೆಗಳು ಸಂಭವಿಸಿದ ಬಳಿಕವೂ ಪ್ರಯಾಣಿಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

 

ಮಕ್ಕಳು ಅಪಾಯಕಾರಿ ರೀತಿಯಲ್ಲಿ ಬಸ್‌ ಪ್ರಯಾಣ ಮಾಡುತ್ತಿರುವುದರಿಂದ ಪೋಷಕರೂ ಚಿಂತಿತರಾಗಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ-ಕಾಲೇಜು ಆರಂಭ ಮತ್ತು ಮುಕ್ತಾಯದ ಸಮಯಕ್ಕೆ ಅನುಗುಣವಾಗಿ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.