ಮಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮರಣದ ಬಳಿಕವೂ ಜಮೆಯಾಗಿದ್ದ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದಿದೆ. ಈವರೆಗೆ ₹95.32 ಲಕ್ಷ ಹಣವನ್ನು ಸರ್ಕಾರದ ಖಾತೆಗೆ ವಾಪಸ್ ಪಡೆಯಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ, ಜಿಲ್ಲೆಯಲ್ಲಿ ಗುರುತಿಸಲಾದ 11,184 ಮೃತ ಫಲಾನುಭವಿಗಳ ಪೈಕಿ 3,477 ಮಂದಿಯ ಖಾತೆಗಳಿಗೆ ಮರಣದ ನಂತರವೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಮೂಲಕ ಒಟ್ಟು ₹3.34 ಕೋಟಿ ಹಣ ಜಮೆಯಾಗಿರುವುದು ತಿಳಿದುಬಂದಿದೆ.
ಈ ಪೈಕಿ ₹95.32 ಲಕ್ಷ ಹಣವನ್ನು 951 ಬ್ಯಾಂಕ್ ಖಾತೆಗಳಿಂದ ಸರ್ಕಾರಕ್ಕೆ ವಾಪಸ್ ಪಡೆಯಲಾಗಿದೆ. ಮತ್ತಷ್ಟು ₹51.50 ಲಕ್ಷ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ.
ಮರಣ ಪ್ರಮಾಣಪತ್ರ ಪಡೆಯದಿರುವುದು ಹಾಗೂ ಮರಣದ ಮಾಹಿತಿಯನ್ನು ಇ-ಜನ್ಮ ಪೋರ್ಟಲ್‌ನಲ್ಲಿ ದಾಖಲಿಸದಿರುವುದು ಹಣ ಮುಂದುವರಿದು ಜಮೆಯಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂದೆ ಗ್ರಾಮಗಳಲ್ಲಿ ಸಂಭವಿಸುವ ಮರಣಗಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತರ ಮೂಲಕ ತಕ್ಷಣ ಪಡೆದು ಗೃಹಲಕ್ಷ್ಮಿ ಪೋರ್ಟಲ್‌ನಲ್ಲಿ ದಾಖಲಿಸುವ ಮೂಲಕ ಇಂತಹ ಪ್ರಕರಣಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬಂಟ್ವಾಳದಲ್ಲೂ ಪ್ರಕರಣಗಳು: ಬಂಟ್ವಾಳ ತಾಲೂಕಿನಲ್ಲಿ 2,286 ಮರಣ ಪ್ರಕರಣಗಳು ದಾಖಲಾಗಿದ್ದು, 747 ಮೃತ ಫಲಾನುಭವಿಗಳ ಖಾತೆಗಳಿಗೆ ಮರಣದ ನಂತರವೂ ಗೃಹಲಕ್ಷ್ಮಿ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಪೈಕಿ 102 ಫಲಾನುಭವಿಗಳ ಖಾತೆಗಳಿಂದ ₹15.22 ಲಕ್ಷ ಹಣವನ್ನು ವಾಪಸ್ ಪಡೆಯಲಾಗಿದೆ.
ಸರ್ಕಾರದ ಹಣ ದುರುಪಯೋಗವಾಗದಂತೆ ಫಲಾನುಭವಿಗಳ ಮಾಹಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪರಿಶೀಲಿಸುವ ಕಾರ್ಯ ಮುಂದುವರಿದಿದೆ.





