08 September 2026 |

ಮದುವೆ ಭರವಸೆ ನೀಡಿ ವಂಚನೆ ಆರೋಪ: ಯುವ ವಕೀಲನ ವಿರುದ್ಧ FIR

  • 08 Sep 2026 10:39:44 AM

ಬೆಂಗಳೂರು/ಬೆಳ್ತಂಗಡಿ: ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ ಬಳಿಕ ವಿವಾಹಕ್ಕೆ ನಿರಾಕರಿಸಿ, ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲೊಡ್ಡಿ ನಿವಾಸಿ ಜಿಜೊ ಪೌಲ್ ಅವರ ಪುತ್ರ ಜಿತಿನ್ ಜಿಜೊ (26) ಪ್ರಕರಣದ ಆರೋಪಿಯಾಗಿದ್ದಾನೆ. ಬೆಳ್ತಂಗಡಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಜಿತಿನ್ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಪ್ರಕರಣದ ಹಿನ್ನೆಲೆ

36 ವರ್ಷದ ಬೆಂಗಳೂರಿನ ನಿವಾಸಿ ಮಹಿಳೆಯೊಬ್ಬರು 2021ರಲ್ಲಿ ವಿವಾಹವಾಗಿದ್ದರು. ಬಳಿಕ ಪತಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಗೃಹಹಿಂಸೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ 2025ರ ಫೆಬ್ರವರಿಯಲ್ಲಿ ಯಲಹಂಕದಲ್ಲಿ ವಾಸಿಸುತ್ತಿದ್ದ ವಕೀಲ ಜಿತಿನ್ ಜಿಜೊ ಅವರ ಪರಿಚಯವಾಗಿತ್ತು. ನಂತರ ಮಹಿಳೆ ತಮ್ಮ ಪ್ರಕರಣಕ್ಕೆ ಅವರನ್ನು ವಕೀಲರನ್ನಾಗಿ ನೇಮಿಸಿಕೊಂಡಿದ್ದರು.

 

ಕಾನೂನು ಪ್ರಕರಣದ ಕುರಿತು ಚರ್ಚಿಸುತ್ತಿದ್ದ ವೇಳೆ ಜಿತಿನ್ ತನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ಮಹಿಳೆಗೆ ಶೀಘ್ರದಲ್ಲೇ ವಿಚ್ಛೇದನ ದೊರಕುವಂತೆ ಮಾಡಿ ಬಳಿಕ ವಿವಾಹವಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆ ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಜಿತಿನ್ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದನೆಂದೂ, ಅಲ್ಲಿಗೆ ಆಗಾಗ್ಗೆ ಬಂದು ಮಹಿಳೆಯ ವಿರೋಧದ ನಡುವೆಯೂ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆಂದು ಆರೋಪಿಸಲಾಗಿದೆ.

 

ವಿಚ್ಛೇದನದ ಬಳಿಕ ಹೆಚ್ಚಿದ ಅನುಮಾನ

2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ದೊರೆತ ಬಳಿಕ ಜಿತಿನ್ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿಂದಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 2ರಂದು ಮಹಿಳೆಯ ಮನೆಗೆ ಬಂದಿದ್ದ ಜಿತಿನ್, ಆಕೆಯ ಮೊಬೈಲ್‌ನಲ್ಲಿದ್ದ ‘Signal App’ನ ಸಂಭಾಷಣೆಗಳು ಸೇರಿದಂತೆ ಮದುವೆಯ ಭರವಸೆಗೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳನ್ನು ಅಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

 

ಇದನ್ನು ಮಹಿಳೆ ಪ್ರಶ್ನಿಸಿದಾಗ ಜಿತಿನ್ ಆಕ್ರೋಶಗೊಂಡು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಬಟ್ಟೆ ಹರಿದು ಮುಖ, ಎದೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಲ್ಲದೆ, ದೇಹಕ್ಕೆ ಕಚ್ಚಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಣೆಯಲ್ಲಿದ್ದ ಸ್ಟ್ಯಾಂಡ್ ಫ್ಯಾನ್‌ನಿಂದಲೂ ಹಲ್ಲೆ ನಡೆಸಿ, ವೇಲ್ ಬಳಸಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

 

ಈ ವೇಳೆ ಮಹಿಳೆ ಆರೋಪಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿ, ಸಮೀಪದ ಎನ್.ಆರ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

 

ಪ್ರಕರಣ ದಾಖಲು, ಆರೋಪಿ ನಾಪತ್ತೆ

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 3ರಂದು ಬಾಗಲಗುಂಟೆ ಪೊಲೀಸರು ಜಿತಿನ್ ಜಿಜೊ ವಿರುದ್ಧ BNS-2023ರ ಸೆಕ್ಷನ್‌ಗಳಾದ 69, 126(2), 115(2), 118(1), 74, 351(2), 352 ಮತ್ತು 238 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಪ್ರಕರಣ ದಾಖಲಾಗುತ್ತಿದ್ದಂತೆ ಜಿತಿನ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪತ್ತೆಯಾಗದಂತೆ ತೆರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಮುಂದುವರಿಸಿದ್ದು, ಆತನನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ.