ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಫೋನ್‌ಗಳ ಬಳಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಮಂಗಳೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ 9 ಮಂದಿ ಕೈದಿಗಳ ಬಳಿಯಿಂದ ಒಟ್ಟು 10 ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಾಗೃಹದ ‘ಎ-ಬ್ಲಾಕ್’ನಲ್ಲಿ ಪೊಲೀಸರು ಕೂಲಂಕಷ ತಪಾಸಣೆ ನಡೆಸಿದಾಗ ಕೈದಿಗಳು ಅಕ್ರಮವಾಗಿ ಮೊಬೈಲ್ ಬಳಸುತ್ತಿರುವುದು ಪತ್ತೆಯಾಗಿದೆ. ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಪಕ್ ಅಲಿಯಾಸ್ ಜುಟ್ಟು ಅಸ್ಪಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಹಾಗೂ ಅರ್ಫಜ್ ಅವರಿಂದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಇವರಲ್ಲಿ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಪಕ್ ಅಲಿಯಾಸ್ ಜುಟ್ಟು ಅಸ್ಪಕ್ ಮತ್ತು ಅರ್ಷದ್ ಅವರು ತೊಕ್ಕೊಟ್ಟು ಸಮೀಪ ನಡೆದ ಅರೀಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಹಾಗೂ ಅಬ್ದುಲ್ ಸಾದೀಕ್ ಎನ್‌ಡಿಪಿಎಸ್ ಪ್ರಕರಣಗಳ ಆರೋಪಿಗಳಾಗಿದ್ದು, ಅರ್ಫಜ್ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ‘ಕೋಕಾ’ (KOCA) ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 8, 2026ರಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026ರಂತೆ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್ ಕಲಂ 323 ಹಾಗೂ ಕರ್ನಾಟಕ ಕಾರಾಗೃಹ ಕಾಯ್ದೆಯ ಕಲಂ 42ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಜೈಲಿನೊಳಗೆ ಮೊಬೈಲ್ ಫೋನ್‌ಗಳು ಹೇಗೆ ಬಂದವು, ಅವುಗಳನ್ನು ಯಾರು ಸರಬರಾಜು ಮಾಡಿದರು ಮತ್ತು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕುರಿತು ಬರ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.





