15 September 2026 |

ಗಣೇಶೋತ್ಸವ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿ

  • 14 Sep 2026 09:54:39 AM

ಮಂಗಳೂರು: ಗಣೇಶೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮಗಳ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಜೊತೆಗೆ ಸಂಚಾರ ವ್ಯವಸ್ಥೆಯ ಮೇಲೂ ಪೊಲೀಸರು ಗಮನ ಹರಿಸಿದ್ದಾರೆ.

 

ದಕ್ಷಿಣ ಕನ್ನಡದಲ್ಲಿ 230 ಮೂರ್ತಿಗಳ ಪ್ರತಿಷ್ಠಾಪನೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 230 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕಾರ್ಯಕ್ರಮಗಳು ನಡೆಯಲಿವೆ. ಈ ಪೈಕಿ ಬೆಳ್ತಂಗಡಿ ಉಪವಿಭಾಗದಲ್ಲಿ 103, ಪುತ್ತೂರು ಉಪವಿಭಾಗದಲ್ಲಿ 79 ಹಾಗೂ ಬಂಟ್ವಾಳದಲ್ಲಿ 48 ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.

 

ಭದ್ರತಾ ವ್ಯವಸ್ಥೆಗಾಗಿ 520 ಪೊಲೀಸ್ ಸಿಬ್ಬಂದಿ, 150 ಹೋಮ್‌ಗಾರ್ಡ್‌ಗಳು ಸೇರಿದಂತೆ 5 KSRP ಮತ್ತು 5 DAR ತುಕಡಿಗಳನ್ನು ನಿಯೋಜಿಸಲಾಗಿದೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ 174 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.

 

ಉಡುಪಿಯಲ್ಲಿ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ

ಉಡುಪಿ ಜಿಲ್ಲೆಯಲ್ಲಿ ಒಟ್ಟು 492 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ 74 ಸ್ಥಳಗಳನ್ನು ಸೂಕ್ಷ್ಮ ಹಾಗೂ 3 ಸ್ಥಳಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

 

ಜಿಲ್ಲೆಯಲ್ಲಿ ಭದ್ರತೆಗಾಗಿ ಒಟ್ಟು 996 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯ ಮೇಲೆ ನಿಗಾ ಇರಿಸಲು 3 ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಅಗತ್ಯವಿರುವ ಕಡೆ ಹೆಚ್ಚುವರಿ ಮೇಲ್ವಿಚಾರಣೆಯ ವ್ಯವಸ್ಥೆ ಮಾಡಲಾಗಿದೆ. ವಿವಿಧ ಹಂತಗಳಲ್ಲಿ ನಡೆಯಲಿರುವ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳು ಸೆಪ್ಟೆಂಬರ್ 14ರಿಂದ 29ರವರೆಗೆ ನಡೆಯಲಿವೆ.

 

ನಿಯಮ ಪಾಲನೆಗೆ ಪೊಲೀಸರ ಸೂಚನೆ

ಗಣೇಶೋತ್ಸವ ಆಯೋಜಿಸುವ ಸಮಿತಿಗಳು ಮೆರವಣಿಗೆಗೆ ಅನುಮತಿ ಪಡೆದ ಮಾರ್ಗವನ್ನೇ ಬಳಸಬೇಕು ಮತ್ತು ನಿಗದಿಪಡಿಸಿರುವ ಸ್ಥಳದಲ್ಲಿಯೇ ಮೂರ್ತಿ ವಿಸರ್ಜನೆ ನಡೆಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಲಾಗಿದೆ.

 

ಅದೇ ರೀತಿ, ಯಾವುದೇ ರೀತಿಯ ಪ್ರಚೋದನಕಾರಿ ಘೋಷಣೆಗಳು ಅಥವಾ ಅಹಿತಕರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹಾಗೂ ಆಯೋಜಕರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.