ಗುವಾಹಟಿ: ಪತ್ನಿಯನ್ನು ಕೊಲೆ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದ ಆರೋಪ ಎದುರಿಸುತ್ತಿದ್ದ ರಾಮಾನುಜ್ ಗೋಸ್ವಾಮಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ. ಸೋಮವಾರ ಮುಂಜಾನೆ ಗುವಾಹಟಿಯ ನರಕಾಸುರ ಬೆಟ್ಟದ ಸಮೀಪ ಈ ಘಟನೆ ನಡೆದಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಪೊಲೀಸರು ರಾಮಾನುಜನನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಆತ ಚಲಿಸುತ್ತಿದ್ದ ವಾಹನದಿಂದ ಏಕಾಏಕಿ ಜಿಗಿದಿದ್ದಾನೆ. ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 3ರಂದು ನಡೆದ ಪತ್ನಿಯ ಹತ್ಯೆಯ ಬಳಿಕ ರಾಮಾನುಜ್ ಸೆಪ್ಟೆಂಬರ್ 6ರಂದು ಪೊಲೀಸರಿಗೆ ಶರಣಾಗಿದ್ದ. ಬಳಿಕ ಆತನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿ ನೀಡಲಾಗಿತ್ತು. ಕಸ್ಟಡಿ ಅವಧಿ ಭಾನುವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು.
ಸೆಪ್ಟೆಂಬರ್ 8ರಂದು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಮಾನುಜ್, ತಾನು ಮಾಡಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಪತ್ನಿಯ ತಂದೆಯನ್ನು ಕೊಲ್ಲುವುದಾಗಿ ಕೂಡ ಆತ ಹೇಳಿಕೆ ನೀಡಿದ್ದ ಎನ್ನಲಾಗಿದೆ.
ರಾಮಾನುಜ್ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 22ರಂದು ರಿಯಾ ತಾಲೂಕ್‌ದಾರ್ ಅವರನ್ನು ವಿವಾಹವಾಗಿದ್ದ. ದಂಪತಿ ಗುವಾಹಟಿಯ ಬೆಲ್ಲೋಲಾ ಪ್ರದೇಶದ ಬಸಿಸ್ಥಾಪುರದಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.
ಸೆಪ್ಟೆಂಬರ್ 3ರ ಬೆಳಗ್ಗೆ ಪತ್ನಿಯ ವಿವಾಹೇತರ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಕೋಪಗೊಂಡ ರಾಮಾನುಜ್ ಪತ್ನಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ಆರೋಪಿಸಿದ್ದರು.
ನಂತರ ರಾಮಾನುಜನನ್ನು ವಶಕ್ಕೆ ಪಡೆದ ಪೊಲೀಸರು ಫ್ಲಾಟ್‌ನಲ್ಲಿ ಪರಿಶೀಲನೆ ನಡೆಸಿ, ಮೃತದೇಹ ಹಾಗೂ ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದರು. ಇದೀಗ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ನಡುವೆಯೇ ಆರೋಪಿ ಮೃತಪಟ್ಟಿದ್ದಾನೆ.





