ಬೆಳ್ತಂಗಡಿ: ಕುಟುಂಬದ ಸದಸ್ಯರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ₹15.82 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1.80 ಲಕ್ಷ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.
ಆಲಂದಿಲ ನಿವಾಸಿ ನೌಫಲ್ ಬಿ.ಎಂ. (34) ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 13ರ ಮಧ್ಯಾಹ್ನ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ ಮನೆಯನ್ನು ಲಾಕ್ ಮಾಡಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.
ಸೆಪ್ಟೆಂಬರ್ 14ರಂದು ಮನೆಯಲ್ಲಿನ ವೈರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್, ಕುಡ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ವೈರಿಂಗ್ ಕೆಲಸಕ್ಕೆ ಬಂದಿದ್ದರು. ಈ ವೇಳೆ ನೌಫಲ್ ಅವರ ಕಿರಿಯ ಸಹೋದರ ಮೊಹಮ್ಮದ್ ನೌಶಾದ್ ಮನೆಯಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂದು ರಾತ್ರಿ ಸುಮಾರು 8.30ಕ್ಕೆ ನೌಫಲ್ ಹಾಗೂ ಕುಟುಂಬಸ್ಥರು ಮನೆಗೆ ವಾಪಸ್ ಬಂದಾಗ, ಮಲಗುವ ಕೋಣೆಯ ಕಪಾಟಿನಲ್ಲಿದ್ದ ಚಿನ್ನಾಭರಣದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವುದು ತಿಳಿದುಬಂದಿದೆ.
ಕಳವಾಗಿರುವ ಚಿನ್ನಾಭರಣದಲ್ಲಿ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಂಗುರ, ಬಳೆ ಸೇರಿದಂತೆ ಸುಮಾರು ₹15.82 ಲಕ್ಷ ಮೌಲ್ಯದ ಆಭರಣಗಳಿವೆ. ಇದರ ಜೊತೆಗೆ ₹1.80 ಲಕ್ಷ ನಗದನ್ನೂ ಕಳವು ಮಾಡಲಾಗಿದೆ. ನೌಫಲ್ ಅವರ ತಾಯಿಗೆ ಸೇರಿದ 7 ಗ್ರಾಂ ತೂಕದ ಮೂರು ಉಂಗುರಗಳೂ ಕಾಣೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೈರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ನೌಫಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





