ಬೆಳ್ತಂಗಡಿ: ತಾಲೂಕಿನ ಕರಿಮಣೇಲು ಗ್ರಾಮದ ಬಾಕ್ಯರಡ್ಡ ನಿವಾಸಿ ಅಶೋಕ್ ಪೂಜಾರಿ ಅವರಿಗೆ ಸೇರಿದ ತೆರೆದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಆಹಾರ ಅರಸಿಕೊಂಡು ಅಲೆದಾಡುತ್ತಿದ್ದ ವೇಳೆ ಚಿರತೆ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿದ್ದು, ಬಾವಿಯಲ್ಲಿ ಸುಮಾರು ಆರು ಅಡಿ ನೀರು ಇತ್ತು. ಸೆಪ್ಟೆಂಬರ್ 21ರಂದು ಸೋಮವಾರ ಕುಟುಂಬದ ಸದಸ್ಯರು ಚಿರತೆ ಬಾವಿಗೆ ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಮೂಡುಬಿದಿರೆ ಎಸಿಎಫ್ ಆಕಾಶ್ ಕದಂ ಅವರ ಮಾರ್ಗದರ್ಶನದಲ್ಲಿ ವೇಣೂರು ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಅಶ್ವಿತ್, ಅರಣ್ಯ ರಕ್ಷಕ ದಿವಾಕರ್ ಸೇರಿದಂತೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.
ನಂತರ ಹಿರಿಯ ಅರಣ್ಯ ಅಧಿಕಾರಿಗಳ ಸೂಚನೆಯಂತೆ ರಕ್ಷಿಸಲಾದ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.





