ಉಡುಪಿ: ನಗರದ ಚಿತ್ಪಾಡಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್‌ವೊಂದು ಕಳವಾಗಿದ್ದು, ಉಡುಪಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಬಸ್‌ನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಮುದರಂಗಡಿ ಸಮೀಪದ ಮುದ್ದಾಡಿ ಪ್ರದೇಶದಲ್ಲಿ ಬಸ್ ಪತ್ತೆಯಾಗಿದೆ.
ಕುಂದಾಪುರದ ಕಟ್‌ಬೆಲ್ಲೂರು ನಿವಾಸಿ ಕೃಷ್ಣ (51) ಅವರು ಈ ಬಸ್‌ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 28ರಂದು ರಾತ್ರಿ ಸುಮಾರು 9:48ಕ್ಕೆ ಬಸ್‌ನ್ನು ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಚಿತ್ಪಾಡಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಗ್ಯಾರೇಜ್ ಬಳಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ತಮ್ಮ ಮನೆಗಳಿಗೆ ತೆರಳಿದ್ದರು.
ಸೆಪ್ಟೆಂಬರ್ 29ರಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲು ಸ್ಥಳಕ್ಕೆ ಬಂದಾಗ ಬಸ್ ಅಲ್ಲಿರುವುದು ಕಂಡುಬರಲಿಲ್ಲ. ಬಳಿಕ ಕೃಷ್ಣ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 29ರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಬಸ್ ಕದ್ದೊಯ್ದಿರುವುದು ತಿಳಿದುಬಂದಿದೆ.
ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಬಸ್ ಸಾಗಿರುವ ಮಾರ್ಗವನ್ನು ಪರಿಶೀಲಿಸಿ ಬೆನ್ನಟ್ಟಿದ್ದಾರೆ. ಅಂತಿಮವಾಗಿ ಮುದರಂಗಡಿ ಸಮೀಪದ ಮುದ್ದಾಡಿಯ ಹಾಡಿಯೊಂದರಲ್ಲಿ ನಿಲ್ಲಿಸಲಾಗಿದ್ದ ಕಳವಾದ ಬಸ್‌ನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಬಸ್ ಪತ್ತೆಯಾದರೂ ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಉಡುಪಿ ನಗರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.





