ಮಂಗಳೂರು: ನಗರದ ಹೊರವಲಯದ ಜೋಕಟ್ಟೆ ಸಮೀಪದಲ್ಲಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಬುಧವಾರ ಭಾರೀ ಸ್ಫೋಟ ಸಂಭವಿಸಿರುವ ಘಟನೆ ವರದಿಯಾಗಿದೆ. ಸ್ಫೋಟದ ಬಳಿಕ ರಿಫೈನರಿ ಪ್ರದೇಶದಿಂದ ದಟ್ಟ ಹೊಗೆ ಮೇಲಕ್ಕೆ ಚಿಮ್ಮಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಸ್ಫೋಟದ ತೀವ್ರತೆಯಿಂದ ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮನೆಗಳು ಮತ್ತು ಕಟ್ಟಡಗಳ ಬಾಗಿಲು, ಕಿಟಕಿಗಳು ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೋಕಟ್ಟೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೂ ನಡುಕದ ಅನುಭವವಾಗಿದ್ದು, ಕೆಲವು ಕಡೆ ಗಾಜುಗಳಿಗೆ ಹಾನಿಯಾಗಿರುವುದಾಗಿ ಸ್ಥಳೀಯರಿಂದ ಮಾಹಿತಿ ಬಂದಿದೆ.
ವಿಮಾನ ನಿಲ್ದಾಣ ಕಚೇರಿಯಲ್ಲೂ ನಡುಕ
ಸ್ಫೋಟದ ಪರಿಣಾಮ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಯಲ್ಲಿಯೂ ನಡುಕದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಕಚೇರಿಯ ಕಿಟಕಿ ಗಾಜುಗಳು ತೀವ್ರವಾಗಿ ಕಂಪಿಸಿದ್ದು, ಸಿಬ್ಬಂದಿ ಹಾಗೂ ಅಲ್ಲಿದ್ದವರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು ಎನ್ನಲಾಗಿದೆ.
ಆಕಾಶಕ್ಕೆ ಚಿಮ್ಮಿದ ದಟ್ಟ ಹೊಗೆ
ಸ್ಫೋಟದ ನಂತರ MRPL ಘಟಕದ ಪ್ರದೇಶದಿಂದ ದಟ್ಟ ಕಪ್ಪು ಹೊಗೆ ಮೇಲಕ್ಕೆ ಏರಿದೆ. ಹಲವು ಕಿಲೋಮೀಟರ್ ದೂರದಿಂದಲೂ ಹೊಗೆ ಗೋಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಕುರಿತು MRPL ಸಾರ್ವಜನಿಕ ಸಂಪರ್ಕ ಅಧಿಕಾರಿ ರುಡಾಲ್ಫ್ ನೊರೊನ್ಹಾ ಪ್ರತಿಕ್ರಿಯಿಸಿದ್ದು, ಕಂಪನಿ ಆವರಣದೊಳಗೆ ಸ್ಫೋಟ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ. ಸ್ಫೋಟಕ್ಕೆ ತಾಂತ್ರಿಕ ದೋಷವೇ ಅಥವಾ ಘಟಕದಲ್ಲಿನ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಯೇ ಕಾರಣ ಎಂಬುದನ್ನು ತಜ್ಞರ ತಂಡ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ MRPLನ ಆಂತರಿಕ ಅಗ್ನಿಶಾಮಕ ದಳ ಹಾಗೂ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಫೋಟದಿಂದ ಉಂಟಾಗಿರುವ ನಿಖರ ಹಾನಿ, ಯಾವುದೇ ಸಾವು-ನೋವು ಅಥವಾ ಗಾಯಗಳಾಗಿವೆಯೇ ಎಂಬ ಬಗ್ಗೆ ಹೆಚ್ಚಿನ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ತನಿಖೆ ಮತ್ತು ಪರಿಶೀಲನೆ ಬಳಿಕ ಘಟನೆಯ ನಿಖರ ಕಾರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.





