ಕಾಪು: ಫ್ಲೈಓವರ್ ಸಮೀಪ ಆಟೋ ರಿಕ್ಷಾ ಹಾಗೂ ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾಗೆ, ರಸ್ತೆ ಬದಿಯ ಬ್ಯಾನರ್ ತೆರವು ಕಾರ್ಯಕ್ಕೆ ಬಳಸಲಾಗುತ್ತಿದ್ದ ಕಾಪು ಪುರಸಭೆಯ ಟೆಂಪೋ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ಪರಿಣಾಮ ಆಟೋದಲ್ಲಿದ್ದ ಉಚ್ಚಿಲ ನಿವಾಸಿ ಸಂಧ್ಯಾ ಹಾಗೂ ಅವರ ಮಕ್ಕಳಾದ ಗಾಯನ್ ಮತ್ತು ಸುವಿತ್ ಗಾಯಗೊಂಡಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುವಿತ್‌ನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.





