03 October 2026 |

₹21.7 ಲಕ್ಷ ಮೌಲ್ಯದ ನಕಲಿ ನೋಟು ಜಾಲ ಪತ್ತೆ; 7 ಮಂದಿ ಬಂಧನ

  • 02 Oct 2026 11:48:15 AM

ನಕಲಿ ಕರೆನ್ಸಿ ನೋಟುಗಳ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ದೊಡ್ಡ ಮೊತ್ತದ ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ.

 

ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ನಗರದ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ವೇಳೆ ₹500 ಮುಖಬೆಲೆಯ ಒಟ್ಟು 4,337 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ₹21.7 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

 

ನಕಲಿ ನೋಟುಗಳನ್ನು ತಯಾರಿಸಿ ಚಲಾವಣೆಗೆ ಬಿಡುವ ಜಾಲದ ಕುರಿತು ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

 

ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಂಧಿತರ ಬಳಿಯಿಂದ ನಕಲಿ ನೋಟುಗಳ ಜೊತೆಗೆ ದಂಧೆಗೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಕೂಡ ಜಪ್ತಿ ಮಾಡಲಾಗಿದೆ.

 

ಇದಲ್ಲದೆ, ಆರೋಪಿಗಳು ಬಳಸುತ್ತಿದ್ದ ಕಾರೊಂದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳ ತಯಾರಿಕೆ ಮತ್ತು ಚಲಾವಣೆಯಲ್ಲಿ ಆರೋಪಿಗಳ ಪಾತ್ರವೇನು, ಈ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ನಕಲಿ ನೋಟುಗಳು ಮತ್ತು ಇತರ ವಸ್ತುಗಳನ್ನು ಪರಿಶೀಲಿಸಲಾಗುತ್ತಿದ್ದು, ದಂಧೆಯ ಸಂಪೂರ್ಣ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರುವ ಸಾಧ್ಯತೆಯಿದೆ. ಪ್ರಕರಣದ ತನಿಖೆ ಮುಂದುವರಿದಿದೆ.