03 October 2026 |

ಮಳೆ ರಜೆ ಹೊಂದಾಣಿಕೆಗೆ ದಸರಾ ರಜೆಯಲ್ಲಿ ವಿಶೇಷ ತರಗತಿ

  • 02 Oct 2026 06:07:42 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.

 

ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿದ್ದ ಮನವಿಗಳನ್ನು ಪರಿಶೀಲಿಸಿದ ಜಿಲ್ಲಾ ಡಿಡಿಪಿಐ, ಅ.3ರಿಂದ ಅ.7ರವರೆಗೆ ಮಳೆ ರಜೆ ಹೊಂದಾಣಿಕೆಗಾಗಿ ತರಗತಿಗಳನ್ನು ನಡೆಸಲು ಅನುಮತಿ ನೀಡಿದ್ದಾರೆ.

 

ಆದರೆ, ಅ.3ರಿಂದಲೇ ದಸರಾ ರಜೆ ಆರಂಭಿಸುವ ಶಿಕ್ಷಣ ಸಂಸ್ಥೆಗಳು ಮಳೆ ರಜೆಯ ಹೊಂದಾಣಿಕೆಯನ್ನು ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

 

ವಿಶೇಷ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿದೆ. ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕಳುಹಿಸಲು ಪೋಷಕರಿಂದ ಕಡ್ಡಾಯವಾಗಿ ಲಿಖಿತ ಒಪ್ಪಿಗೆ ಪಡೆಯಬೇಕು. ಈ ಒಪ್ಪಿಗೆ ಪತ್ರಗಳನ್ನು ಶಾಲೆಯಲ್ಲಿ ದಾಖಲೆಯಾಗಿ ಸಂರಕ್ಷಿಸಬೇಕು.

 

ಇದರೊಂದಿಗೆ ಎಸ್‌ಡಿಎಂಸಿ ಸಭೆ ನಡೆಸಿ, ವಿಶೇಷ ತರಗತಿಗಳನ್ನು ನಡೆಸುವ ಕುರಿತು ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಸಭೆಯ ನಡವಳಿಯಲ್ಲಿ ದಾಖಲಿಸಬೇಕು.

 

ಶಾಲೆಯಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ವಿಶೇಷ ತರಗತಿಗಳನ್ನು ನಡೆಸುತ್ತಿರುವ ವಿವರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆಯೂ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.