29 October 2026 |

ಹೆಲ್ತ್ ಇನ್ಶೂರೆನ್ಸ್ ನವೀಕರಣದ ಹೆಸರಿನಲ್ಲಿ ಮಹಿಳೆಗೆ ₹2.68 ಲಕ್ಷ ವಂಚನೆ

  • 28 Oct 2026 02:36:21 PM

ಮಂಗಳೂರು: ಆರೋಗ್ಯ ವಿಮೆಯ ಪ್ರೀಮಿಯಂ ಪಾವತಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ₹2.68 ಲಕ್ಷ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

42 ವರ್ಷದ ಮಹಿಳೆಗೆ ಅಕ್ಟೋಬರ್ 16ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಅವರ ಆರೋಗ್ಯ ವಿಮೆಯ ಅವಧಿ ಮುಗಿಯುತ್ತಿದ್ದು, ಪ್ರೀಮಿಯಂ ಪಾವತಿಸುವಂತೆ ತಿಳಿಸಿದ್ದಾನೆ. ಬಳಿಕ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ, ಹಣ ಪಾವತಿಸಲು ಲಿಂಕ್ ಒಂದನ್ನು ಕಳುಹಿಸಿದ್ದಾನೆ.

 

ಆರೋಪಿಯ ಮಾತನ್ನು ನಂಬಿದ ಮಹಿಳೆ ಅಕ್ಟೋಬರ್ 23ರಂದು ಲಿಂಕ್ ಕ್ಲಿಕ್ ಮಾಡಿ, ಕ್ರೆಡಿಟ್ ಕಾರ್ಡ್ ಬಳಸಿ ₹27,764 ಪಾವತಿಸಿದ್ದಾರೆ. ಮರುದಿನ ಕರೆ ಮಾಡಿದ ವ್ಯಕ್ತಿ, ವಿಮೆಯ ಪರಿಶೀಲನೆಗಾಗಿ ಒಟಿಪಿ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಇದನ್ನು ನಂಬಿದ ಮಹಿಳೆ ತಮ್ಮ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ.

 

ನಂತರ ಅಕ್ಟೋಬರ್ 23ರಿಂದ 25ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2,68,803 ಹಣ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಆನ್‌ಲೈನ್ ಮೂಲಕ ವಂಚಿಸಿ ಹಣ ವರ್ಗಾಯಿಸಿಕೊಂಡಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.