ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಮಂಗಳವಾರ ಬೋಟ್‌ನ ಮೀನು ಸಂಗ್ರಹಣಾ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಈ ಘಟನೆ ನಡೆದಿದೆ.
ಮೃತರನ್ನು ನೌಶಾದ್ (48), ಅಮೀನ್ (40) ಹಾಗೂ ಆಮನ್ (26) ಎಂದು ಗುರುತಿಸಲಾಗಿದೆ. ತದಡಿ ಬಂದರಿನಲ್ಲಿ ಲಂಗರು ಹಾಕಿದ್ದ 'ಕುಚೈಮಾ' ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಮುದ್ರದಲ್ಲಿ 'ಚಮನ್' ತಳಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದ ಮೀನುಗಾರರು, ಬೋಟ್‌ನಲ್ಲಿದ್ದ ಟ್ಯಾಂಕ್‌ನಿಂದ ಮೀನುಗಳನ್ನು ಖಾಲಿ ಮಾಡಿದ್ದರು. ಬಳಿಕ ಟ್ಯಾಂಕ್‌ನೊಳಗೆ ಇಳಿದು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಟ್ಯಾಂಕ್‌ನೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲ ಅಥವಾ ಕೊಳೆತ ಮೀನಿನಿಂದ ಉಂಟಾದ ಅನಿಲವನ್ನು ಉಸಿರಾಡಿದ್ದರಿಂದ ಮೀನುಗಾರರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಉಸಿರಾಟದ ತೊಂದರೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವೇಳೆ ಟ್ಯಾಂಕ್‌ನೊಳಗೆ ಐವರು ಮೀನುಗಾರರು ಸಿಲುಕಿಕೊಂಡಿದ್ದರು. ತಕ್ಷಣವೇ ನೆರವಿಗೆ ಧಾವಿಸಿದ ಇತರ ಮೀನುಗಾರರು ಇಬ್ಬರನ್ನು ಹೊರತೆಗೆದು ರಕ್ಷಿಸಿದ್ದಾರೆ. ಅವರಲ್ಲಿ ಅಬ್ದುಲ್ ಯಾಕುಬ್ ದಾಡಿಯಾ (60) ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುರಂತಕ್ಕೆ ನಿಖರ ಕಾರಣವೇನು ಮತ್ತು ಬೋಟ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.





