16 September 2025 | Join group

ಕಲ್ಲಡ್ಕ, ಮಾಣಿ, ಮೆಲ್ಕಾರ್, ಪಾಣೆಮಂಗಳೂರು ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್

  • 02 Mar 2025 11:20:59 AM

ಬಂಟ್ವಾಳ, ಮಾರ್ಚ್ 02, 2025 : ದಕ್ಷಿಣ ಕನ್ನಡ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ( ದಿಶಾ ) ಸಮಿತಿ ಸಭೆ ಮಾರ್ಚ್ 01, 2025 ಶನಿವಾರದಂದು ಕ್ಯಾ. ಬೃಜೇಶ್ ಚೌಟರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲೆಯ ಎಲ್ಲಾ ಶಾಸಕರುಗಳು ಮತ್ತು ಸಂಬಧಪಟ್ಟ ಅಧಿಕಾರಿಗಳ ಜೊತೆ ನಡೆದ ಈ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಮಾಹಿತಿಯನ್ನು ಪಡೆಯಲಾಯಿತು.

 

ಕಲ್ಲಡ್ಕ ಫ್ಲೈ ಓವರ್ ಮತ್ತು ರಸ್ತೆಯ ಕಾಮಗಾರಿ ಕೊನೆಯ ಹಂತದಲ್ಲಿ ಇರುವುದರಿಂದ ಈ ವರ್ಷ ಏಪ್ರಿಲ್ ತಿಂಗಳಲ್ಲೇ ಸಂಚಾರಕ್ಕೆ ಮುಕ್ತಗೊಳ್ಳುವ ನೀರಿಕ್ಷೆ ಇದೆ ಎಂದು ಎನ್ಎಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ವಿವರಣೆ ನೀಡುವ ಮೂಲಕ ತಿಳಿಸಿರುತ್ತಾರೆ. 

 

ಇದರ ಜೊತೆಗೆ ಅಡ್ಡಹೊಳೆ - ಬಿ.ಸಿ ರೋಡ್ ನಡುವಿನ ಚತುಷ್ಪಥ ರಸ್ತೆಯ ಪ್ರಮುಖ ಭಾಗಗಳಾದ ಮಾಣಿ ಓವರ್ ಪಾಸ್, ಮೆಲ್ಕಾರ್ ಓವರ್ ಪಾಸ್, ಪಾಣೆಮಂಗಳೂರು ಓವರ್ ಪಾಸ್ ಮತ್ತು ಇನ್ನಿತರ ಭಾಗಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

 

ತಿಂಗಳ ಹಿಂದೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಧಿಕಾರಿಗಳ ಜೊತೆ ಚತುಷ್ಪಥ ಕಾಮಗಾರಿಯ ಪರಿಶೀಲನೆ ನಡೆಸಿ " ಬಿ ಸಿ ರೋಡ್ ನಿಂದ ಪೆರಿಯಶಾಂತಿ ತನಕ ನಡೆಯುತ್ತಿರುವ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಹೆಚ್ಚಿನ ವೇಗ ನೀಡಿದ್ದು, ಮಳೆಗಾಲ ಆರಂಭಕ್ಕೆ ಮುನ್ನ ಮೇ ಅಂತ್ಯಕ್ಕೆ ಸಂಚಾರ ಯೋಗ್ಯ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ " ಎಂಬ ಭರವಸೆಯ ಮಾತನ್ನು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದ್ದರು. 

 

ಕಲ್ಲಡ್ಕ, ಮಾಣಿ, ಮೆಲ್ಕಾರ್, ಪಾಣೆಮಂಗಳೂರು ಮತ್ತು ಇನ್ನಿತರ ಆಸುಪಾಸಿನ ಜನರಿಗೆ ಮಳೆಯ ಮುಂಚೆ ರಸ್ತೆಯ ಫ್ಲೈ ಓವರ್ ಕಾಮಗಾರಿ ಮುಗಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಅದಕ್ಕಿಂದ ದೊಡ್ಡ ಸಂತಸದ ವಿಷಯ ಬೇರೊಂದಿಲ್ಲ ಎಂದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಯಾಕೆಂದರೆ ಈ ಚತುಷ್ಪಥ ಶುರು ಆದ ಸಂದರ್ಭದಿಂದ ಮಳೆಯ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಪ್ರಯಾಣಿಕರು ಎದುರಿಸುತ್ತಿದ್ದರು ಅದರಲ್ಲೂ ಕಲ್ಲಡ್ಕ ಸಿಟಿಯ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.