05 November 2026 |

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ದಡಾರ ಸೋಂಕು: ಈ ಬಾರಿ 67 ಮಂದಿಗೆ ಪಾಸಿಟಿವ್!

  • 05 Nov 2026 05:24:36 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ (ಮೀಸಲ್ಸ್) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದುವರೆಗೆ ಸುಮಾರು 250 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 67 ಮಂದಿಗೆ ದಡಾರ ಸೋಂಕು ದೃಢಪಟ್ಟಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 45 ಪ್ರಕರಣಗಳು ಮಾತ್ರ ವರದಿಯಾಗಿದ್ದವು.

 

ಮಕ್ಕಳಿಗೆ ನಿಗದಿತ ಸಮಯದಲ್ಲಿ ದಡಾರದ ಲಸಿಕೆ ಹಾಕಿಸದಿರುವುದು ಸೋಂಕು ಹರಡಲು ಪ್ರಮುಖ ಕಾರಣವಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಕೋವಿಡ್ ಅವಧಿಯಲ್ಲಿ ಕೆಲವು ಮಕ್ಕಳಿಗೆ ಲಸಿಕೆ ನೀಡುವ ವೇಳಾಪಟ್ಟಿ ತಪ್ಪಿಹೋಗಿರುವ ಸಾಧ್ಯತೆಯಿದೆ. ಇದರ ಪರಿಣಾಮ ಈಗ ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಮಕ್ಕಳಷ್ಟೇ ಅಲ್ಲದೆ, 18ರಿಂದ 20 ವರ್ಷದ ಯುವಕರಲ್ಲಿಯೂ ದಡಾರ ಪತ್ತೆಯಾದ ಉದಾಹರಣೆಗಳಿವೆ ಎಂದು ನಗರದ ವೈದ್ಯರೊಬ್ಬರು ತಿಳಿಸಿದ್ದಾರೆ.

 

ಮೀಸಲ್ಸ್-ರುಬೆಲ್ಲಾ ವೈರಸ್‌ನಿಂದ ಹರಡುವ ದಡಾರ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಬೇಗನೆ ಹರಡುವ ಸಾಧ್ಯತೆ ಇದೆ. ಹಿರಿಯ ಮಕ್ಕಳ ತಜ್ಞ ವೈದ್ಯ ಡಾ. ಶಾಂತಾರಾಮ ಬಾಳಿಗ ಅವರ ಪ್ರಕಾರ, ಮಗುವಿಗೆ 9 ತಿಂಗಳು ಮತ್ತು 15 ತಿಂಗಳ ವಯಸ್ಸಿನಲ್ಲಿ ಕಡ್ಡಾಯವಾಗಿ ದಡಾರದ ಲಸಿಕೆ ನೀಡಬೇಕು. ಈ ಎರಡು ಡೋಸ್‌ಗಳಲ್ಲಿ ಯಾವುದಾದರೂ ಒಂದು ತಪ್ಪಿದರೂ ಸೋಂಕು ತಗಲುವ ಅಪಾಯವಿರುತ್ತದೆ.

 

ದಡಾರದಿಂದ ಗಂಭೀರ ಆರೋಗ್ಯ ಸಮಸ್ಯೆಗಳ ಸಾಧ್ಯತೆ:

ಸಾಮಾನ್ಯವಾಗಿ ದಡಾರ ಸೋಂಕಿನಿಂದ ಹೆಚ್ಚಿನವರು ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವರಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ನ್ಯುಮೋನಿಯಾ, ತೀವ್ರ ಅತಿಸಾರ, ದೇಹದಲ್ಲಿ ನೀರಿನ ಕೊರತೆ, ಕಣ್ಣಿನ ಸಮಸ್ಯೆ ಹಾಗೂ ಮೆದುಳಿನ ಉರಿಯೂತದಂತಹ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

 

ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳು, ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗಬಹುದು. ದಡಾರದ ವೈರಸ್‌ನ್ನು ನೇರವಾಗಿ ನಾಶಪಡಿಸುವ ನಿರ್ದಿಷ್ಟ ಔಷಧ ಲಭ್ಯವಿಲ್ಲ. ಹೀಗಾಗಿ ಚಿಕಿತ್ಸೆಯಲ್ಲಿ ಜ್ವರ ಸೇರಿದಂತೆ ಇತರ ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಗಂಭೀರ ತೊಂದರೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.

 

ದಡಾರದ ಪ್ರಮುಖ ಲಕ್ಷಣಗಳೇನು?

ಸೋಂಕು ತಗುಲಿದ ತಕ್ಷಣವೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳ ನಂತರ ರೋಗದ ಸೂಚನೆಗಳು ಕಂಡುಬರುತ್ತವೆ.

- ಜ್ವರ ಕಾಣಿಸಿಕೊಳ್ಳುವುದು.

- ಕೆಮ್ಮು ಮತ್ತು ಮೂಗು ಸೋರುವುದು.

- ಕಣ್ಣು ಕೆಂಪಾಗುವುದು ಹಾಗೂ ನೀರು ಬರುವುದು.

- ಬೆಳಕನ್ನು ನೋಡಲು ಕಷ್ಟವಾಗುವುದು.

- ಕೆನ್ನೆಯ ಒಳಭಾಗದಲ್ಲಿ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವುದು.

- ಮುಖ ಅಥವಾ ಕೂದಲಿನ ಅಂಚಿನಿಂದ ಆರಂಭವಾಗುವ ಚರ್ಮದ ದದ್ದುಗಳು ಕುತ್ತಿಗೆ, ಎದೆ, ಕೈ ಮತ್ತು ಕಾಲುಗಳಿಗೆ ಹರಡುವುದು.

 

ಗಾಳಿಯ ಮೂಲಕ ವೇಗವಾಗಿ ಹರಡುವ ಸೋಂಕು:

ದಡಾರ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಹನಿಗಳು ಹಾಗೂ ಗಾಳಿಯ ಮೂಲಕ ವೈರಸ್ ಇತರರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಇದ್ದ ಕೋಣೆಯಲ್ಲಿಯೂ ವೈರಸ್ ಸ್ವಲ್ಪ ಸಮಯ ಗಾಳಿಯಲ್ಲಿ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಲಸಿಕೆ ಪಡೆಯದವರಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುತ್ತದೆ.

 

ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ನಿಗದಿತ ವೇಳಾಪಟ್ಟಿಯಂತೆ ದಡಾರದ ಎರಡೂ ಡೋಸ್ ಲಸಿಕೆ ಹಾಕಿಸಿರುವುದನ್ನು ಪೋಷಕರು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.