12 November 2026 |

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ: ಹೆಜಮಾಡಿ ಟೋಲ್ ಬಳಿ ನಾಲ್ವರು ಪೊಲೀಸರ ವಶಕ್ಕೆ

  • 11 Nov 2026 06:37:17 PM

ಪಡುಬಿದ್ರೆ: ಗೋವಾದಿಂದ ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 11ರಂದು ಹೆಜಮಾಡಿ ಟೋಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಮದ್ಯ ಸಾಗಾಟದ ಜಾಲ ಪತ್ತೆಯಾಗಿದೆ.

 

ಬಂಧಿತರನ್ನು ಕಾರವಾರದ ವಿನಯ್ (47), ಗಜಾನನ ಮಹಾಬಲೇಶ್ವರ ನಾಯ್ಕ (45), ಸುಜಿತ್ ತಾಳೆಕೆರೆ (25) ಹಾಗೂ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ.

 

ಆರೋಪಿಗಳಿಂದ ಸುಮಾರು 2,583 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹14.35 ಲಕ್ಷ ಎಂದು ತಿಳಿದುಬಂದಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಮಹೀಂದ್ರಾ ಪಿಕ್‌ಅಪ್ ವಾಹನ ಹಾಗೂ ಎಸ್ಕಾರ್ಟ್ ನೀಡಲು ಬಳಸಿದ್ದ ₹3 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ₹22.35 ಲಕ್ಷ ಎಂದು ಅಂದಾಜಿಸಲಾಗಿದೆ.

 

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಸ್ಮಿತ್ ಆಲಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಹೆಜಮಾಡಿ ಟೋಲ್ ಬಳಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ಹಾಗೂ ಅದರ ಮುಂಭಾಗದಲ್ಲಿ ಮತ್ತೊಂದು ಕಾರು ಎಸ್ಕಾರ್ಟ್ ನೀಡುತ್ತಿರುವುದು ಪತ್ತೆಯಾಗಿದೆ.

 

ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 138/2026ರ ಅಡಿಯಲ್ಲಿ ಅಬಕಾರಿ ಕಾಯ್ದೆಯ ಕಲಂ 32, 34, 38(a) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 336(4)ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

 

ಬಂಧಿತ ವಿನಯ್ ವಿರುದ್ಧ ಈ ಹಿಂದೆಯೂ ಕಾರವಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

 

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಸ್ಮಿತ್ ಆಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಡುಬಿದ್ರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.