12 November 2026 |

ಬೆಂಗಳೂರಿನಲ್ಲಿ 1.2 ಕೆಜಿ ಚಿನ್ನ ಕಳವು: ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕ ಬಂಧನ

  • 12 Nov 2026 10:23:39 AM

ಬೆಂಗಳೂರು: ಗ್ರಾಹಕರು ಬ್ಯಾಂಕ್‌ನಲ್ಲಿ ಚಿನ್ನದ ಸಾಲಕ್ಕಾಗಿ ಅಡವಿಟ್ಟಿದ್ದ ಸುಮಾರು 1 ಕೆಜಿ 198 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪದ ಮೇಲೆ ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕ ಪವನ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದಾನೆ.

 

ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡುವುದರ ಜೊತೆಗೆ, ನಕಲಿ ಚಿನ್ನಾಭರಣಗಳನ್ನು ಬಳಸಿ ಇತರ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮವಾಗಿ ಚಿನ್ನದ ಸಾಲದ ಖಾತೆಗಳನ್ನು ತೆರೆದಿದ್ದಾನೆ ಎನ್ನಲಾಗಿದೆ. ಈ ಮೂಲಕ ಬ್ಯಾಂಕ್‌ಗೆ ಸುಮಾರು ₹35.40 ಲಕ್ಷ ನಷ್ಟ ಉಂಟುಮಾಡಿರುವ ಆರೋಪವೂ ಕೇಳಿಬಂದಿದೆ.

 

ಈ ವಂಚನೆ ಪ್ರಕರಣ ಅಕ್ಟೋಬರ್ 9ರಂದು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಬೆಳಕಿಗೆ ಬಂದಿದೆ. ತನಿಖೆ ಕೈಗೊಂಡ ಪೊಲೀಸರು ಅಕ್ಟೋಬರ್ 13ರಂದು ದೊಡ್ಡಬಳ್ಳಾಪುರದ ರೋಜಿಪುರ ಗೇಟ್ ಸಮೀಪದ ನಿವಾಸದಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

ವಿಚಾರಣೆ ವೇಳೆ ಕಳವು ಮಾಡಿದ ಚಿನ್ನಾಭರಣಗಳನ್ನು ರಾಜಾನುಕುಂಟೆಯ ನಾಲ್ಕು ಹಾಗೂ ದೊಡ್ಡಬಳ್ಳಾಪುರದ ಎರಡು ಆಭರಣ ಮಳಿಗೆಗಳಲ್ಲಿ ಅಡವಿಟ್ಟಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಆರೋಪಿಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅಕ್ಟೋಬರ್ 14ರಿಂದ 22ರ ಅವಧಿಯಲ್ಲಿ ನಾಲ್ಕು ಆಭರಣ ಮಳಿಗೆಗಳಿಂದ ಒಟ್ಟು 1 ಕೆಜಿ 198 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ಸುಮಾರು ₹1.80 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.