17 November 2026 |

ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬೈಂದೂರಿನ ಯುವಕ ಅಪಘಾತದಲ್ಲಿ ದುರ್ಮರಣ

  • 16 Nov 2026 10:21:20 AM

ಉಡುಪಿ: ಉದ್ಯೋಗದ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬೈಂದೂರಿನ ಯುವಕನೊಬ್ಬ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

 

ಮೃತರನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ, 26 ವರ್ಷದ ಅಕ್ಷಯ್ ಎನ್. ಹೆಬ್ಬಾರ್ ಎಂದು ಗುರುತಿಸಲಾಗಿದೆ.

 

ಅಕ್ಷಯ್ ಇಂಜಿನಿಯರಿಂಗ್ ಪದವಿ ಮುಗಿಸಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ಹಾಜರಾಗುವ ಉದ್ದೇಶದಿಂದ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಇದೇ ರೀತಿಯ ಪ್ರಯಾಣದ ವೇಳೆ ಈ ದುರ್ಘಟನೆ ಸಂಭವಿಸಿದೆ.

 

ಕುಟುಂಬದ ಏಕೈಕ ಪುತ್ರನಾಗಿದ್ದ ಅಕ್ಷಯ್, ತಂದೆ-ತಾಯಿಯ ಪಾಲಿಗೆ ದೊಡ್ಡ ಆಸರೆಯಾಗಿದ್ದರು. ಸರಳ ಹಾಗೂ ಸೌಮ್ಯ ಸ್ವಭಾವದವರಾಗಿದ್ದ ಅವರು ಪ್ರತಿದಿನ ಸಂಜೆ ತಾಯಿಯೊಂದಿಗೆ ಮನೆಯ ಸಮೀಪ ವಾಯುವಿಹಾರಕ್ಕೆ ತೆರಳುವ ಅಭ್ಯಾಸ ಹೊಂದಿದ್ದರು.

 

ಅವರ ತಂದೆ ನಾರಾಯಣ ಹೆಬ್ಬಾರ್ ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ.

 

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರ ದುಃಖ ಮುಗಿಲು ಮುಟ್ಟಿದೆ. ವಯಸ್ಸಾದ ತಂದೆ-ತಾಯಿಗೆ ಆಸರೆಯಾಗಬೇಕಿದ್ದ ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ.