ಬಳ್ಳಾರಿ: ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಯುವಕನ ಹೆಸರನ್ನು ಬಳಸಿಕೊಂಡು ಬರೋಬ್ಬರಿ ₹350 ಕೋಟಿ ಮೊತ್ತದ ಜಿಎಸ್‌ಟಿ ವಹಿವಾಟು ನಡೆಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಬಳ್ಳಾರಿಯ ರೋಷನ್ ಜಮೀಲ್ ಎಂಬ ಯುವಕನ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಆತನ ಹೆಸರಿನಲ್ಲಿ ನಕಲಿ ಸಂಸ್ಥೆಯನ್ನು ನೋಂದಾಯಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ನಕಲಿ ಸಂಸ್ಥೆಯ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಜಿಎಸ್‌ಟಿ ವಹಿವಾಟು ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಯುವಕನಿಗೆ ತಿಳಿಯದಂತೆ ಆತನ ದಾಖಲೆಗಳನ್ನು ಬಳಸಿಕೊಂಡು ಈ ವಂಚನೆ ಎಸಗಲಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಹಿಂದಿರುವ ವ್ಯಕ್ತಿಗಳು ಯಾರು ಮತ್ತು ಇಷ್ಟು ದೊಡ್ಡ ಮೊತ್ತದ ವಹಿವಾಟು ಹೇಗೆ ನಡೆದಿದೆ ಎಂಬುದನ್ನು ತನಿಖೆಯಿಂದ ತಿಳಿದುಬರಬೇಕಿದೆ.





