ಪುತ್ತೂರು: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮೂರು ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಹಸುಗಳನ್ನು ರಕ್ಷಿಸಿದ್ದಾರೆ.
ನವೆಂಬರ್ 15ರ ರಾತ್ರಿ ಪುತ್ತೂರು ತಾಲೂಕಿನ ಮಾಡೂರು ಗ್ರಾಮದ ಈಶ್ವರಮಂಗಲದಲ್ಲಿ ಈ ಘಟನೆ ನಡೆದಿದೆ.
ಈಶ್ವರಮಂಗಲದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ತಮಿಳುನಾಡು ನೋಂದಣಿಯ ಅಶೋಕ್ ಲೇಲ್ಯಾಂಡ್ ಟೆಂಪೊದಲ್ಲಿ ಮೂರು ಹಸುಗಳನ್ನು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ವಾಹನವನ್ನು ತಡೆದು ಪರಿಶೀಲಿಸಿದಾಗ, ಗೋವುಗಳ ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆ ಇಲ್ಲದಿರುವುದು ತಿಳಿದುಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ಸಾಗಾಟ ಮಾಡಲಾಗುತ್ತಿದ್ದ ಮೂರು ಹಸುಗಳನ್ನು ರಕ್ಷಿಸಿದ್ದಾರೆ.





