ಉಡುಪಿ: ಪರ್ಕಳದಲ್ಲಿ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ಭಾನುವಾರ (ನ.15) ಮುಂಜಾನೆ ನಡೆದಿದೆ. ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿಯಲ್ಲಿ ಮಲಗಿದ್ದ ದನಗಳನ್ನು ಕಳವು ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಕಾರಿನಿಂದ ಕೆಳಗಿಳಿದು ದನಗಳ ಸಮೀಪಕ್ಕೆ ಬರುತ್ತಿದ್ದ ಇಬ್ಬರನ್ನು ಕಂಡ ತಕ್ಷಣ ಜಾನುವಾರುಗಳ ಹಿಂಡು ಗಾಬರಿಗೊಂಡು ಅಲ್ಲಿಂದ ಓಡಿಹೋಗಿದೆ. ಇದರಿಂದ ದನಗಳು ಕಳ್ಳರ ಕೈಗೆ ಸಿಗದೆ ಪಾರಾಗಿವೆ.
ದನಗಳು ಓಡಿಹೋದ ಬಳಿಕವೂ ಕೆಲ ಸಮಯ ಸ್ಥಳದಲ್ಲೇ ಕಾದಿದ್ದ ಆರೋಪಿಗಳು, ನಂತರ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆಯ ದೃಶ್ಯಾವಳಿಗಳು ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮುಂಜಾನೆ ನಡೆದ ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ದನ ಕಳ್ಳತನಕ್ಕೆ ಯತ್ನಿಸಿದ ಅಪರಿಚಿತರನ್ನು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.





