ಬಂಟ್ವಾಳ: ಸಿಮೆಂಟ್ ಮತ್ತು ಕಬ್ಬಿಣದ ವ್ಯಾಪಾರ ಸಂಸ್ಥೆಯೊಂದರ ಹಣ ಸಂಗ್ರಹಿಸಿ ಬೈಕ್ನಲ್ಲಿ ಸಾಗುತ್ತಿದ್ದ ಉದ್ಯೋಗಿಯನ್ನು ತಲವಾರು ತೋರಿಸಿ ಬೆದರಿಸಿ ₹8.35 ಲಕ್ಷ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕಣ್ಣೂರಿನ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಅವರು, 2026ರ ಆಗಸ್ಟ್ 20ರಂದು ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದ ಹಣ ಸಂಗ್ರಹಿಸಲು ವಿವಿಧ ಅಂಗಡಿಗಳಿಗೆ ತೆರಳಿದ್ದರು. ಬಳಿಕ ಅಂಗಡಿಗಳಿಂದ ಹಣ ಪಡೆದು ಕಕ್ಕೆಪದವಿನಿಂದ ಪಾಣೆಮಂಗಳೂರು ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬ ಪ್ರದೇಶದಲ್ಲಿ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಅಪರಿಚಿತರು ಅವರನ್ನು ಅಡ್ಡಗಟ್ಟಿದ್ದಾರೆ. ತಲವಾರು ತೋರಿಸಿ ಬೆದರಿಸಿದ ದುಷ್ಕರ್ಮಿಗಳು ಮಯ್ಯದಿ ಅವರ ಬಳಿಯಿದ್ದ ₹8,35,000 ನಗದನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಂಗಳೂರು ಶಕ್ತಿನಗರದ ಪ್ರವಿತ್ ಶೆಟ್ಟಿ, ಉಳ್ಳಾಲ ಕೋಡಿಯ ಉಮ್ಮರ್ ಫಾರೂಕ್ ಹಾಗೂ ಉಳ್ಳಾಲ ಹರೇಕಳದ ಶಾಕೀರ್ ಎಂಬ ಮೂವರನ್ನು ನವೆಂಬರ್ 11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನಂತರ ಆರೋಪಿಗಳನ್ನು ನವೆಂಬರ್ 16ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಅವರಿಂದ ₹2,01,000 ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ಪ್ರಕರಣದಲ್ಲಿ ಪ್ರವಿತ್ ರಾಜ್ ಶೆಟ್ಟಿ ಎಂಬಾತನ ಗುರುತು ಪತ್ತೆ ಪರೇಡ್ ಕೂಡ ನಡೆಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.





