ಮಂಗಳೂರು: ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಕಾಪಾಡದ ಸಂಸ್ಥೆಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸುರತ್ಕಲ್ ಹಾಗೂ ಬೈಕಂಪಾಡಿ ಪ್ರದೇಶಗಳಲ್ಲಿ ಅಧಿಕಾರಿಗಳು ನಡೆಸಿದ ವಿಶೇಷ ತಪಾಸಣೆಯಲ್ಲಿ ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ ಒಂದು ತಿಂಡಿ ತಯಾರಿಕಾ ಘಟಕಕ್ಕೆ ಬೀಗ ಹಾಕಲಾಗಿದ್ದು, ಎರಡು ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಐದು ತಂಡಗಳು ನವೆಂಬರ್ 16ರಂದು ವಿವಿಧ ಆಹಾರ ತಯಾರಿಕಾ ಘಟಕಗಳು, ಹೋಟೆಲ್‌ಗಳು ಹಾಗೂ ಆಹಾರ ಮಾರಾಟ ಮಳಿಗೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದವು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಘಟಕದಲ್ಲಿ ಚೀಸ್ ಬಾಲ್ ಸೇರಿದಂತೆ ತಿಂಡಿ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಅಧಿಕಾರಿಗಳ ಪರಿಶೀಲನೆಯ ವೇಳೆ ಘಟಕದಲ್ಲಿ ತೀವ್ರ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಹೆಗ್ಗಣಗಳು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಅಧಿಕಾರಿಗಳು ಘಟಕವನ್ನು ತಕ್ಷಣ ಮುಚ್ಚಿಸಿ ಬೀಗಮುದ್ರೆ ಹಾಕಿದ್ದಾರೆ.
ಇದೇ ವೇಳೆ ಸುರತ್ಕಲ್‌ನ ಸೂರಜ್; ಇಂಟರ್‌ನ್ಯಾಷನಲ್ ಹೋಟೆಲ್ ನಲ್ಲಿ ಶುಚಿತ್ವ ಕಾಪಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಸುರತ್ಕಲ್‌ನ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್ ಅಡುಗೆ ಮನೆಯಲ್ಲಿಯೂ ನೈರ್ಮಲ್ಯ ಕೊರತೆ ಪತ್ತೆಯಾಗಿದ್ದು, ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆಹಾರ ಮಾದರಿಗಳು ಪ್ರಯೋಗಾಲಯಕ್ಕೆ;
ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಹಾಗೂ ಸುರಕ್ಷತಾ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದಲ್ಲದೆ, ಸುರತ್ಕಲ್‌ನ ಮೋರ್ ರಿಟೇಲ್ ಮಳಿಗೆ, ಆನ್‌ಲೈನ್ ಆಹಾರ ಮತ್ತು ದಿನಸಿ ವಿತರಣಾ ಸಂಸ್ಥೆ ಬ್ಲಿಂಕಿಟ್‌ನ ಗೋದಾಮು ಹಾಗೂ ಎನ್‌ಐಟಿಕೆ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಆಹಾರ ಪೂರೈಸುವ ಅಡುಗೆ ಘಟಕಗಳಲ್ಲಿಯೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟದ ವೇಳೆ ಕಡ್ಡಾಯ ನೈರ್ಮಲ್ಯ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ದಾಳಿ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.





