ಉತ್ತರ ಪ್ರದೇಶದ ಕಾನ್ಪುರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಬಂಧಿಕರನ್ನು ಬೀಳ್ಕೊಡಲು ತೆರಳಿದ್ದ 12 ಮಂದಿ ಅನಿರೀಕ್ಷಿತವಾಗಿ ರೈಲಿನೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ರೈಲಿನ ಸ್ವಯಂಚಾಲಿತ ಬಾಗಿಲುಗಳು ಲಾಕ್ ಆಗಿದ್ದರಿಂದ ಕೆಳಗಿಳಿಯಲು ಸಾಧ್ಯವಾಗದೆ, ಅನಿವಾರ್ಯವಾಗಿ ರೈಲಿನಲ್ಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರೋಪದಡಿ ರೈಲ್ವೆ ಇಲಾಖೆ ಒಟ್ಟು ₹36 ಸಾವಿರ ದಂಡ ವಿಧಿಸಿದೆ.
ವಾರಣಾಸಿಯಿಂದ ನವದೆಹಲಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿ ನಿಂತಿತ್ತು. ಈ ಸಂದರ್ಭದಲ್ಲಿ ತಮ್ಮ ಸಂಬಂಧಿಕರಿಗೆ ಸಹಾಯ ಮಾಡಲು 12 ಮಂದಿ ರೈಲಿನೊಳಗೆ ಹತ್ತಿದ್ದರು. ಪ್ರಯಾಣಿಕರ ಲಗೇಜ್ಗಳನ್ನು ಸರಿಯಾಗಿ ಇರಿಸಿ, ಅವರಿಗೆ ನಿಗದಿಪಡಿಸಿದ ಆಸನಗಳಲ್ಲಿ ಕೂರಿಸುವ ಉದ್ದೇಶದಿಂದ ಇವರು ರೈಲು ಪ್ರವೇಶಿಸಿದ್ದರು. ಆದರೆ, ಕೆಲಸ ಮುಗಿಸಿ ಕೆಳಗಿಳಿಯುವಷ್ಟರಲ್ಲಿ ರೈಲು ಹೊರಡುವ ಸಮಯವಾಗಿತ್ತು. ಅಷ್ಟರಲ್ಲಿ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡು ಲಾಕ್ ಆಗಿದ್ದರಿಂದ ಅವರು ಒಳಗೇ ಉಳಿಯುವಂತಾಯಿತು.
ಕಾನ್ಪುರದಿಂದ ಹೊರಟ ರೈಲು ಮುಂದಿನ ನಿಲ್ದಾಣವಾದ ನವದೆಹಲಿಯತ್ತ ಪ್ರಯಾಣ ಆರಂಭಿಸಿತ್ತು. ಈ ರೈಲು ವಾರಣಾಸಿ, ಪ್ರಯಾಗ್ರಾಜ್ ಮತ್ತು ಕಾನ್ಪುರ ಸೇರಿದಂತೆ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿರುವುದರಿಂದ ಮಧ್ಯದಲ್ಲಿ ಇಳಿಯಲು ಅವಕಾಶವಿರಲಿಲ್ಲ. ಇದರಿಂದ ಆತಂಕಗೊಂಡ 12 ಮಂದಿ ರೈಲನ್ನು ತಕ್ಷಣ ನಿಲ್ಲಿಸಿ ತಮ್ಮನ್ನು ಕೆಳಗಿಳಿಸುವಂತೆ ರೈಲ್ವೆ ಸಿಬ್ಬಂದಿಯನ್ನು ಒತ್ತಾಯಿಸಿದ್ದಾರೆ. ಈ ವೇಳೆ ರೈಲಿನೊಳಗೆ ಕೆಲಕಾಲ ಗದ್ದಲವೂ ಉಂಟಾಗಿದೆ ಎಂದು ವರದಿಯಾಗಿದೆ.
ಘಟನೆಯ ಕುರಿತು ಮಾಹಿತಿ ನೀಡಿದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಸಿಲುಕಿಕೊಂಡಿದ್ದ 12 ಮಂದಿಯ ಬಳಿ ಪರಿಶೀಲನೆ ನಡೆಸಿದಾಗ ಪ್ರಯಾಣದ ಟಿಕೆಟ್ ಮಾತ್ರವಲ್ಲದೆ, ಪ್ಲಾಟ್ಫಾರ್ಮ್ ಟಿಕೆಟ್ ಕೂಡ ಇರಲಿಲ್ಲ ಎಂದು ತಿಳಿಸಿದ್ದಾರೆ.
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಲ್ಲದೆ, ರೈಲಿನೊಳಗೆ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ನಿಯಮಾನುಸಾರ ಪ್ರತಿಯೊಬ್ಬರಿಗೂ ₹3,000 ದಂತೆ ಒಟ್ಟು ₹36,000 ದಂಡ ವಿಧಿಸಲಾಗಿದೆ. ಬಳಿಕ ಅವರಿಗೆ ಟಿಕೆಟ್ ನೀಡಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಬಂಧಿಕರನ್ನು ರೈಲಿನಲ್ಲಿ ಕೂರಿಸಿ ಬೀಳ್ಕೊಡಲು ಹೋಗಿದ್ದವರಿಗೆ ಕೊನೆಗೆ ತಾವೇ ಪ್ರಯಾಣಿಕರಾಗುವ ಪರಿಸ್ಥಿತಿ ಎದುರಾಗಿದ್ದು, ಈ ಘಟನೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲದವರು ರೈಲಿನೊಳಗೆ ಪ್ರವೇಶಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವನ್ನು ನೆನಪಿಸಿದೆ.





