ಇನ್ನೂ ಸಿಗದ ಫರಂಗಿಪೇಟೆಯಿಂದ ನಾಪತ್ತೆಯಾದ ದಿಗಂತ್ : ಗಾಂಜಾ ಮಾಫಿಯಾದ ಕೈಚಳಕವೇ ಅಥವಾ ಪೊಲೀಸರ ವೈಫಲ್ಯವೇ..?!

  • 04 Mar 2025 06:02:55 PM

ಬಂಟ್ವಾಳ, ಮಾರ್ಚ್ 04, 2025 : ಬಂಟ್ವಾಳ ತಾಲೂಕು, ಫರಂಗಿಪೇಟೆಯ ಕಿದೆಬೆಟ್ಟುವಿನಿಂದ ನಾಪತ್ತೆಯಾದ ವಿದ್ಯಾರ್ಥಿ ದಿಗಂತ್ ಇನ್ನೂ ಪತ್ತೆಯಾಗದೇ ಇರುವುದು ತುಂಬಾ ಆಶ್ಚರ್ಯಕರ ಸಂಗತಿ. ಪೊಲೀಸರು ಪ್ರತಿಯೊಂದು ಕೋನದಲ್ಲಿ ಶೋಧ ನಡೆಸಿದರು ಯಾವುದೇ ಪ್ರತಿಫಲ ದೊರೆತಿಲ್ಲ.

ಈ ಘಟನೆ ಬಗ್ಗೆ ಇಲ್ಲಿಯವರೆಗಿನ ಪ್ರಗತಿಯನ್ನು ತಿಳಿಯಲು ಓದಿ.

ಯಾವಾಗ ಈ ಘಟನೆ ನಡೆದಿತ್ತು ?
ದಿನಾಂಕ ಫೆಬ್ರವರಿ 26,2025 ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗುವುದೆಂದು ತಿಳಿಸಿ ಹೊರಟ ದಿಗಂತ್ ಮತ್ತೆ ತಿರುಗಿ ಬಂದಿಲ್ಲ. ಈತನ ವಯಸ್ಸು 17 ವರ್ಷವಾಗಿದ್ದು, ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಆತನ ಚಪ್ಪಲಿಗಳು ಮತ್ತು ಮೊಬೈಲ್ ರೈಲ್ವೆ ಹಳಿಯಲ್ಲಿ ಬಿದ್ದಿತ್ತು ಮತ್ತು ಅದರಲ್ಲಿ ರಕ್ತದ ಕಲೆಗಳು ಇದ್ದವು ಎಂದು ವರದಿಯಾಗಿದೆ. ಮನೆಯವರು ಈತ ಮರಳಿ ಬರದೇ ಇದ್ದುದನ್ನು ಅರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಂದೇ ದಿನ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದರು.

 

ಮುಖಂಡರು, ಸಂಘಟನೆ ಮತ್ತು ಸಾರ್ವಜನಿಕರಿಂದ ಪ್ರತಿಭಟನೆ :
ನಾಪತ್ತೆಯಾದ ದಿಗಂತ್ 5 ದಿವಸವಾದರೂ ಪತ್ತೆಯಾಗದೇ  ಇದ್ದುದ್ದರಿಂದ ಕೆರಳಿದ ಕೆಲ ಹಿಂದೂ ಸಂಘಟನೆಗಳು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಬೀದಿಗಿಳಿದು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಮುಖವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬೃಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮತ್ತೊಬ್ಬ ಶಾಸಕ ಹರೀಶ್ ಪೂಂಜಾ, ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪವೆಲ್ ಇನ್ನಿತರ ಮುಖಂಡರು ಭಾಗವಹಿಸಿ ಪೊಲೀಸರನ್ನು ತರಾಟೆಗೆ ತೆಗೆಂದುಕೊಂಡರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೂಡ ದಿಗಂತ್ ಮನೆಗೆ ಭೇಟಿ ಕೊಟ್ಟು ಸಾಂತ್ವನ ತಿಳಿಸಿದರು.

 

ಪ್ರತಿಭಟನಾಕಾರರ ಒತ್ತಾಯ :
ಜಿಲ್ಲೆಯಲ್ಲಿ ಗಾಂಜಾ ಮತ್ತು ಡ್ರಗ್ಸ್ ದಂಧೆ ಹೆಚ್ಚಾಗಿದ್ದು ಅದರಲ್ಲೂ ಫರಂಗಿಪೇಟೆಯಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗಿದೆ, ಇದಕ್ಕೆ ಪೊಲೀಸರು ಆದಷ್ಟು ಬೇಗ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ದಿನದಿಂದ ದಿನಕ್ಕೆ ಡ್ರಗ್ಸ್ ಮಾಫಿಯಾ ಹೆಚ್ಚಾಗುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ. ಯುವ ಜನತೆ ಇದಕ್ಕೆ ಬಲಿಯಾಗದಂತೆ ಪೊಲೀಸರು ಕಾಪಾಡಿಕೊಳ್ಳಬೇಕು, ಸರಕಾರ ಪೊಲೀಸರಿಗೆ ಎಲ್ಲಾ ವ್ಯವಸ್ಥೆ ಮತ್ತು ಸಾಮಗ್ರಿಗಳನ್ನು ಒದಗಿಸಿದ್ದು, ನಮ್ಮ ಬೇಡಿಕೆ ಆದಷ್ಟು ಬೇಗ ದಿಗಂತ್ ನನ್ನು ಹುಡುಕಿ ಕೊಡಬೇಕು ಎನ್ನುವುದು. ಒಂದು ವೇಳೆ ತಕ್ಷಣ ಈ ಸಮಸ್ಯೆ ಬಗೆಹರಿಸದೆ ಇದ್ದಾರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರ ನೀಡಿದ್ದಾರೆ.

 

ತಂದೆ ತಾಯಿಯವರ ಪ್ರತಿಕ್ರಿಯೆ :
ಕೆಲವರು ಹೇಳುವ ಪ್ರಕಾರ ಆತ ಪರೀಕ್ಷೆಯಿಂದ ತಪ್ಪಿಸಲು ಓಡಿಹೋಗಿದ್ದಾನೆ ಎನ್ನುವ ಮಾತಿಗೆ ತಿರಿಗೇಟು ಕೊಟ್ಟಿರುವ ಪೋಷಕರು, ನಮ್ಮ ಮಗ ಪರೀಕ್ಷೆಗೆ ಹೆದುರುವ ಹುಡುಗನಲ್ಲ, ಆತ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿದ್ದ ಎಂದು ತಿಳಿಸಿದರು. ಕಾಲೇಜ್ ನಿಂದ ಪರೀಕ್ಷೆಯ ಹಾಲ್ ಟಿಕೆಟ್ ಕೂಡ ಸಂಗ್ರಹಿಸಿದ್ದ ಎಂದು ತಿಳಿಸಿದರು. ನಮ್ಮ ಮಗನನ್ನು ಆದಷ್ಟು ಬೇಗ ಹುಡುಕಿ ಕೊಡಿ ಎಂದು ಗೋಳಿಟ್ಟರು.

 

ಪೊಲೀಸ್ ಅಧಿಕಾರಿಗಳಿಂದ ಭರವಸೆ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತಿನ್ ಎನ್, ದಿಗಂತ್ ನಾಪತ್ತೆ ಪ್ರಕರಣವನ್ನು ತೀವ್ರಗೊಳಿಸಿದ್ದೇವೆ, ಪ್ರಕರಣ ದುರಾದೃಷ್ಟವತ್ ಪ್ರತಿಭಟನೆ ಹಂತಕ್ಕೆ ಬಂದಿದೆ, ಈ ಹಂತದವರಿಗೆ ಬರಬಾರದಿತ್ತು. ಜಿಲ್ಲೆಯ ನುರಿತ ಇತರ ಠಾಣೆಯ ಪೊಲೀಸರನ್ನು ಕರೆಸಿ ಪ್ರಾಮಾಣಿಕ ಪ್ರಯತ್ನ ಮಾಡಿ ದಿಗಂತ್ ಪತ್ತೆಯಾಗುವವರೆಗೆ ಸುಮ್ಮನೆ ಕೂರುವುದಿಲ್ಲ ಎಂಬಾ ಭರವಸೆಯನ್ನು ನೀಡಿದ್ದಾರೆ. ಯಾರಾಗಿದ್ದರು ಘಟನೆ ಬಗ್ಗೆ ಸುಳಿವು ಇದ್ದಾರೆ ತಿಳಿಸಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

 

ದಿಗಂತ್ ನಾಪತ್ತೆಯಾದ ದಿನ ದೇವಸ್ಥಾನದ ಬಳಿ ಅಪರಿಚಿತ ಕ್ವಾಲಿಸ್ ಕಾರೊಂದು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಜಾ ವ್ಯಸನಿಗಳ ಕೈವಾಡದ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ. ದಿಗಂತ್ ಉಪಯೋಗಿಸುತ್ತಿದ್ದ ಮೊಬೈಲ್ ನೆಟ್ವರ್ಕ್ ಬಳಸಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಯಾವ ಮಟ್ಟಕ್ಕೆ ಈ ಕೇಸ್ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.  ನಾವು ಇದನ್ನು ನಿಮಗೆ ಅಪ್‌ಡೇಟ್ ಮಾಡುತ್ತಾ ಇರುತ್ತೇವೆ.