ಬಂಟ್ವಾಳ, ಮಾರ್ಚ್ 05, 2025 : ಕರಾವಳಿ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಸೆಕೆಯ ಪ್ರಭಾವ ಹೆಚ್ಚಾಗುತ್ತಲೇ ಇದೆ. ಅತಿಯಾದ ಸೆಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಉಷ್ಣ ಅಲೆಯ ಪ್ರಭಾವದಿಂದ ದಿನದ ಎಲ್ಲಾ ಸಮಯದಲ್ಲಿ ಬಿಸಿ ವಾತಾವರಣವಿದೆ. ಸಾಮಾನ್ಯವಾಗಿ ಋತುವಿಗನುಸಾರವಾಗಿ ಫೆಬ್ರವರಿ ತಿಂಗಳವರೆಗೆ ಹೆಚ್ಚು ಚಳಿ ನಂತರ ಸ್ವಲ್ಪ ಪ್ರಮಾಣದಲ್ಲಿ ಸೆಕೆ ಹೆಚ್ಚಳವಾಗೋದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ಫೆಬ್ರವರಿ ತಿಂಗಳಲ್ಲೇ ಅತಿಯಾದ ಸೆಕೆ ಕಾಡಿತ್ತು.
ಕರಾವಳಿ ಭಾಗದಲ್ಲಿ ಈ ರೀತಿಯ ತಾಪಮಾನ ಏರಿಕೆಯಿಂದ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೆರಡು ವಾರಗಳಿಂದ ತಾಪಮಾನ 40 ಡಿ.ಸೆ ದಾಟಿದ ಪರಿಣಾಮ ಉಷ್ಣ ಅಲೆ ಬೀಸುತಿತ್ತು. ಸಾಮಾನ್ಯವಾಗಿ ಏಪ್ರಿಲ್ ತಿಂಗಳ ನಂತರ ಮಳೆ ಬರುವ ಪ್ರಮೇಯವಿದ್ದು, ಈ ವರ್ಷ ತಾಪಮಾನ ಏರಿಕೆಯಿಂದ ಮಳೆಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.
ಗರಿಷ್ಠ ಉಷ್ಣಾಂಶ ಏರಿಕೆಯಿಂದ ಮೋಡ ಸೃಷ್ಟಿಯಾಗಲಿ ರಾಜ್ಯದ ಹಲವೆಡೆ ಮಳೆಯಾಗಲಿದ್ದು, ತಾಪಮಾನವು ಇಳಿಯಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಸದಾ ಕೂಲ್ ಆಗಿರುವ ಬೆಂಗಳೂರು ನಗರದಲ್ಲೂ ಕೂಡ ಈ ವರ್ಷ ಭಾರಿ ಸೆಕೆಯಾಗಿದೆ. ಕಳೆದ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ.50 ಮಳೆಯ ಪ್ರಮಾಣ ಹೆಚ್ಚಾಗಿತ್ತು.
ಹೆಚ್ಚಿನ ತಾಪಮಾನದಲ್ಲಿ ಮಳೆ ಬಂದರೆ, ಜನರಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತದೆ ಆದರೆ ಸ್ವಲ್ಪ ಮಳೆ ಬಂದು ಹೋದರೆ ಸೆಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಜನರು ಕಷ್ಟ ಅನುಭವಿಸಬೇಕಾಗವುದು. ಗೇರುಬೀಜ ಮಾವುಗಳು ಹೂ ಬಿಡುವ ಸಮಯ ಮಳೆ ಬಂದರೆ ಹೂಗಳು ನಾಶವಾಗುವ ಸಾಧ್ಯತೆ ಹೆಚ್ಚು. ಆದರೂ ಈ ತಡೆಯಲಾಗದ ಸೆಕೆಯಲ್ಲಿ ಸ್ವಲ್ಪ ಕೂಲ್ ಮಾಡುವ ತುಂತುರು ಮಳೆ ಬಂದರೆ ಉತ್ತಮ ಎನ್ನುತ್ತಾರೆ ಸೆಕೆಯಿಂದ ಬಳಲುತ್ತಿರುವ ನಾಗರಿಕರು.