- ತಾನು ಹೆತ್ತ ಕಂದಮ್ಮನನ್ನು ಹಣದ ಆಮಿಷಕ್ಕೆ ಬಲಿಯಾಗಿ ಮಾರಾಟ ಮಾಡಿದ ಬಡತನದಲ್ಲಿದ್ದ ತಾಯಿ.
- ಮಗುವನ್ನು ದತ್ತು ಪಡೆದ ಮೂವರಿಗೆ ಮಂಗಳೂರು ನ್ಯಾಯಾಲದಿಂದ ಶಿಕ್ಷೆ ಘೋಷಣೆ.
ಮಂಗಳೂರು: ಹಣದ ಆಮಿಷವೊಡ್ಡಿ ಹೆತ್ತ ತಾಯಿಯೊಬ್ಬಳ ಕೈಯಿಂದ ಮಗುವನ್ನು ಪಡೆದು ಮಾರಾಟ ಮಾಡಲೆತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರ ಮೇಲೆ ಮಂಗಳೂರು ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಈ ಅಮಾನೀಯ ಕೃತ್ಯ ಮಂಗಳೂರಿನ ತೊಕ್ಕೊಟ್ಟು ನಲ್ಲಿರುವ ಕ್ಲಿನಿಕ್ ಒಂದರಲ್ಲಿ 2013 ಜುಲೈ ತಿಂಗಳಲ್ಲಿ ನಡೆದಿತ್ತು.
ಘಟನೆಯ ವಿವರ:
ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ರಂಗವ್ವ ಎನ್ನುವ ಮಹಿಳೆ ತಾನು ಗರ್ಭಿಣಿಯಾಗಿರುವಾಗ ಆಕೆಯ ಬಡತನವನ್ನು ದುರುಪಯೋಗಿಸಿಕೊಂಡ ಆರೋಪಿಗಳಾದ ಪಜೀರ್ ನಿವಾಸಿಗಳಾದ ಲಿನೆಟಾ ವೇಗಸ್, ಪತಿ ಜೊಸ್ಸಿ ವೇಗಸ್ ಮತ್ತು ತಾಯಿ ಲೂಸಿ ವೇಗಸ್ ಆಕೆಗೆ ವಂಚಿಸಿದ್ದರು.
ಲೂಸಿ ವೇಗಸ್ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ತೆರಳಿ ಎರಡೂವರೆ ತಿಂಗಳ ಮಗುವಿನ ದಾಖಲೆ ನೋಂದಣೆ ಮಾಡಲು ತಿಳಿಸಿದಾಗ ಅಲ್ಲಿನ ಶಿಕ್ಷಕಿ ರೆಹನಾ ಅವರಿಗೆ ಅನುಮಾನ ಮೂಡಿತ್ತು. ತಕ್ಷಣ ಅವರು 'ಚೈಲ್ಡ್ ಲೈನ್' ಸಂಸ್ಥೆಗೆ ಸುದ್ದಿ ತಿಳಿಸಿದ್ದು, ಸಾಮಾಜಿಕ ಕಾರ್ಯಕರ್ತರು ಮತ್ತು ಪೊಲೀಸರು ಸಂಚು ರೂಪಿಸಿ ಈ ಪ್ರಕರಣವನ್ನು ಭೇದಿಸಿದ್ದರು. ಅಂಗನವಾಡಿ ಶಿಕ್ಷಿಯ ಸಮಯ ಪ್ರಜ್ಞೆಗೆ ಉತ್ತಮ ಪ್ರಶಂಶೆ ದೊರೆಕಿತ್ತು.
ಕಾರ್ಯಾಚರಣೆಯ ನಡೆಸಿದ ಸಾಮಾಜಿಕ ಕಾರ್ಯಕರ್ತೆ ಮತ್ತು ಪೊಲೀಸ್ ತಂಡ
ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಮತ್ತು ಪೊಲೀಸ ಅಧಿಕಾರಿ ಇಟ್ಟಾಲ್ ಅವರು ಮಗು ಬೇಕೆಂದು ಮುಸ್ಲಿಂ ದಂಪತಿಯಂತೆ ನಟಿಸಿ, ಲೂಸಿ ವೇಗಸ್ ಅವರನ್ನು ಸಂಪರ್ಕಿಸಿದ್ದರು. 2 ಲಕ್ಷ ರೂ ಗೆ ಡೀಲ್ ಕುದಿರಿಸಿದ ತಂಡ, ಮಗುವನ್ನು ತೊಕ್ಕೊಟ್ಟಿನಲ್ಲಿರುವ ಕ್ಲಿನಿಕ್ ಒಂದರಲ್ಲಿ ಹಸ್ತಾಂತರಿಸುವುದಾಗಿ ಒಪ್ಪಿಕೊಂಡರು.
ಅದೇ ಪ್ರಕಾರ, ಮಗುವನ್ನು ಅಲ್ಲಿಗೆ ಕರೆತಂದ ಆರೋಪಿಗಳ ತಂಡ, 'ಮಗುವಿನ ತಾಯಿಗೆ 2 ಲಕ್ಷ ರೂ. ನೀಡಬೇಕು, ನಾವು ಈಗಾಗಲೇ ರೂ. 90 ಸಾವಿರ ಮಗುವಿನ ತಾಯಿಗೆ ನೀಡಿದ್ದೇವೆ, ಉಳಿದ ಹಣ ತಮಗೆ ನೀಡಿ' ಎನ್ನುವಷ್ಟರಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದುಬಿಟ್ಟರು.
ಶಿಕ್ಷೆ ವಿಧಿಸಿದ ಕೋರ್ಟ್
ಇದೀಗ ಮೂವರು ಆರೋಪಿಗಳಾದ ಲಿನೆಟಾ ವೇಗಸ್ (38), ಜೊಸ್ಸಿ ವೇಗಸ್ (54) ಮತ್ತು ಲೂಸಿ ವೇಗಸ್ (65) ಅವರಿಗೆ ಮಂಗಳೂರು ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ವಿಧಿಸಿದೆ. ತಲಾ ರೂ. 5,000 ದಂಡ ವಿಧಿಸಿದ್ದು, ಕಟ್ಟಲು ವಿಫಲವಾದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ ಜಾರಿಯಾಗಲಿದೆ. ಪ್ರಕರಣದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಲಾದ ರೂ. 94,325 ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲು ಆದೇಶಿಸಿದೆ.
ಮಗುವಿನ ಪತ್ತೆಯಿಲ್ಲ
ಇಲ್ಲಿ ಮತ್ತೊಂದು ಬೇಸರ ಸಂಗತಿ ಏನೆಂದರೆ, ಮಾರಾಟವಾದ ಮಗುವನ್ನು ಮತ್ತೊಮ್ಮೆ ತಾಯಿ ರಂಗಮ್ಮನ ಕೈಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ರಂಗಮ್ಮ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು ಮಗುವಿನ ಬಗ್ಗೆ ಸುಳಿವು ಇಲ್ಲದಂತಾಗಿದೆ. ಮಗು ಎಲ್ಲಿ ಇದೆ? ಯಾರ ಜೊತೆ ಇದೆ? ಮಗು ಏನಾಯಿತು? ಯಾವುದೇ ಮಾಹಿತಿ ಇಲ್ಲದಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದ ಕಾರಣ ತನಿಖೆಯು ನಡೆದಿಲ್ಲ.