ಮಂಗಳೂರು: ಭಾರತೀಯ ಸೇನೆಗೆ ಬರುವದಕ್ಕೂ ಮುಂಚೆ ಸೋವಿಯತ್ ಯೂನಿಯನ್‌ನಲ್ಲಿ ವಿನ್ಯಾಸಗೊಂಡಿರುವ ಪ್ರಸಿದ್ಧ ಟಿ–55 ಯುದ್ಧ ಟ್ಯಾಂಕ್ ಈಗ ಮಂಗಳೂರಿಗೆ ಬರಲಿದ್ದು, ಇದನ್ನು ಸಾರ್ವಜನಿಕ ಪ್ರದರ್ಶನಕ್ಕಾಗಿ ಅಳವಡಿಸಲಾಗುತ್ತಿದೆ. ಜೊತೆಗೆ ಹಳೆಯ ಕಾಲದ 303 ರೈಫಲ್ ಕೂಡ ಪ್ರದರ್ಶನದಲ್ಲಿ ಭಾಗವಾಗಲಿದೆ.
ಭಾರತೀಯ ಸೇನೆಯಲ್ಲಿ ಸೇವೆ: ಟಿ–55 ಟ್ಯಾಂಕ್‌ಗಳನ್ನು ಭಾರತವು 1966ರಿಂದ 1968ರ ನಡುವೆ ಸೇನೆಯ ಒಳಗೆ ಸೇರಿಸಿತು. ಇವು ಭಾರತ–ಪಾಕಿಸ್ತಾನ 1971ರ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಸುಮಾರು ನಾಲ್ಕು ದಶಕಗಳ ಸೇವೆ ನಂತರ ಟ್ಯಾಂಕ್‌ಗಳನ್ನು 2011ರ ವೇಳೆಗೆ ಹಂತ ಹಂತವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಯಿತು.
ದೇಶಭಕ್ತಿಯನ್ನು ಉತ್ತೇಜಿಸಲು ಮತ್ತು ಈ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾರತದ ಸೇನಾ ಪರಂಪರೆ ಬಗ್ಗೆ ಸ್ಪಷ್ಟವಾದ ಅರಿವು ಮಾಡಿಸಲು ಉದ್ದೇಶಿಸಲಾಗಿದೆ. ಸ್ಥಳ ಮತ್ತು ದಿನಾಂಕದ ಅಧಿಕೃತ ಮಾಹಿತಿ ಶೀಘ್ರದಲ್ಲೇ ಪ್ರಕಟವಾಗಲಿದೆ. ಇದು ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಿರುವ ಪ್ರತಿಷ್ಠಿತ ಸ್ಥಳವೊಂದರಲ್ಲಿ ಅಳವಡಿಸುವ ಯೋಜನೆಯಿದೆ. ಕದ್ರಿ ಯುದ್ಧ ಸ್ಮಾರಕ ಅಥವಾ ಸರ್ಕ್ಯೂಟ್ ಹೌಸ್ ನಲ್ಲಿ ಅಳವಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ–55 ಟ್ಯಾಂಕ್ ಮಂಗಳೂರಿಗೆ ಆಗಮಿಸುವುದು ಕೇವಲ ಯುದ್ಧ ಸಾಧನದ ಪ್ರದರ್ಶನವಲ್ಲ, ಅದು ನಮ್ಮ ಸೇನೆಯ ಶೌರ್ಯ ಮತ್ತು ಸೇವೆಯ ಸ್ಮರಣೆಗೂ ಪ್ರತೀಕವಾಗಿದೆ.